ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಬೆಳವಣಿಗೆಗಳಿಗೆ ಕಾಲವೇ ಉತ್ತರಿಸಲಿದೆ ಎಂದು ಪ್ರವಾಸೋಜ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಜನಾರ್ದನ ರೆಡ್ಡಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸುವಷ್ಟು ದೊಡ್ಡವನಲ್ಲ. ನಾನು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡಲು ಬಯಸುತ್ತೇನೆ. ವರಿಷ್ಠರ ಬುಲಾವ್ ಹಿನ್ನೆಲೆಯಲ್ಲಿ ದಿಲ್ಲಿಗೆ ತೆರಳುವುದಾಗಿ ತಿಳಿಸಿದರು.
ಭತ್ತಕ್ಕೆ ವೈಜ್ಞಾನಿಕ ಬೆಂಬಲ ಬೆಲೆ ನೀಡಲು ಕೇಂದ್ರವನ್ನು ಒತ್ತಾಯಿಸುವಂತೆ ತಾಲೂಕಿನ ರೈತರು ಮನವಿ ಮಾಡಿದ್ದಾರೆ. ಅದೇ ರೀತಿ ತಾಲೂಕಿನ ಅಭಿವೃದ್ಧಿಗೆ ಗುಲ್ಬರ್ಗದಲ್ಲಿ ನಡೆದ ಸಂಪುಟ ಸಭೆಯಲ್ಲಿ ಪಟ್ಟಣದ ಕುಡಿವ ನೀರಿನ ಕೆರೆ ನಿರ್ಮಾಣಕ್ಕೆ 28 ಕೋಟಿ ರೂ. ಅನುಮೋದನೆ ಮತ್ತು ರಾರಾವಿ ಸೇತುವೆ ನಿರ್ಮಾಣಕ್ಕೆ 30 ಕೋಟಿ ರೂ. ಅನುಮೋದನೆ ದೊರೆತಿದ್ದು, ಕೆಲ ದಿನಗಳಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.