ರಾಯಚೂರು: 3 ವಿದ್ಯಾರ್ಥಿಗಳನ್ನು ಬಾವಿಗೆ ತಳ್ಳಿದ ಕ್ರೂರ ಶಿಕ್ಷಕ
ರಾಯಚೂರು, ಶನಿವಾರ, 20 ನವೆಂಬರ್ 2010( 18:40 IST )
ಮೂವರು ವಿದ್ಯಾರ್ಥಿಗಳನ್ನು ಶಿಕ್ಷಕನೊಬ್ಬ ಬಾವಿಗೆ ತಳ್ಳಿರುವ ಅಮಾನುಷ ಘಟನೆ ರಾಯಚೂರಿನ ನೀರಮಾನ್ವಿ ಎಂಬಲ್ಲಿ ಶನಿವಾರ ನಡೆದಿದೆ.
ನೀರಮಾನ್ವಿಯ ಸಿದ್ದಾರೂಢ ಖಾಸಗಿ ಶಾಲೆಯ ಶಿಕ್ಷಕ ರಾಮಣ್ಣ ಎಂಬಾತ ಮೂರು ಮಕ್ಕಳನ್ನು ಶಾಲೆಯ ಸಮೀಪ ಇರುವ ಬಾವಿಗೆ ತಳ್ಳಿದ್ದ. ಈ ಸಂದರ್ಭದಲ್ಲಿ ಗ್ರಾಮಸ್ಥರು ಗೌಡ ಮತ್ತು ಬಸವರಾಜ್ ಎಂಬ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಿಸಿದ್ದಾರೆ. ಆದರೆ ಐದರ ಹರೆಯದ ವಿದ್ಯಾರ್ಥಿನಿ ಗಗನ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳನ್ನು ಶಿಕ್ಷಕ ಬಾವಿಗೆ ಯಾಕೆ ತಳ್ಳಿದ್ದ ಎಂಬುದು ತಿಳಿದು ಬಂದಿಲ್ಲ. 28 ವರ್ಷದ ಶಿಕ್ಷಕ ರಾಮಣ್ಣ ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿದೆ. ಈತ ಸರಿಯಾಗಿಯೇ ಇದ್ದಾನೆ, ಮಾನಸಿಕ ಅಸ್ವಸ್ಥ ಎಂಬುದು ಸುಳ್ಳು ಎಂದು ಗ್ರಾಮಸ್ಥರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹೇಳಿದ್ದಾರೆ.
ನೀರಿನಿಂದ ಮೇಲಕ್ಕೆತ್ತಿದ ಇಬ್ಬರು ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕ್ಷಕ ಯಾವ ಕಾರಣಕ್ಕೆ ಮೂವರನ್ನು ಬಾವಿಗೆ ತಳ್ಳಿದ ಎಂಬ ಕುರಿತು ವಿದ್ಯಾರ್ಥಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಿಕ್ಷಕ ರಾಮಣ್ಣನನ್ನು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.