ಭಾರಿ ಭೂ ಹಗರಣಗಳ ಹಿನ್ನೆಲೆಯಲ್ಲಿ ಇಂದೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಲೆದಂಡವಾಗಲಿದೆ ಎಂದು ಬಿಜೆಪಿ ಮೂಲಗಳನ್ನು ಉದ್ದೇಶಿಸಿ ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.
ಸಿಎಂ ರಾಜೀನಾಮೆ ಪಡೆಯಲು ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಸಂಜೆ ಸೇರಲಿರುವ ಕೋರ್ ಕಮಿಟಿ ಸಭೆಯಲ್ಲಿ ಅಂತಿಮವಾಗಲಿದೆ. ಆದರೆ ಯಡ್ಡಿ ಪರ್ಯಾಯ ನಾಯಕತ್ವಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬುದೇ ಸಮಸ್ಯೆಯ ಕಾರಣವಾಗಿದೆ.
ಈ ನಿಟ್ಟಿನಲ್ಲಿ ಸಿಎಂ ಸ್ಪರ್ಧೆಯಲ್ಲಿ ಜಗದೀಶ್ ಶೆಟ್ಟರ್ ಮತ್ತು ಸುರೇಶ್ ಕುಮಾರ್ ಹೆಸರು ಕೇಳಿಬರುತ್ತಿವೆ. ಇವೆಲ್ಲವೂ ನಾಯಕತ್ವ ಬದಲಾವಣೆಯ ಪ್ರಶ್ನೆ ಬಗೆಹರಿಸಿದ ನಂತರವಷ್ಟೇ ತಿರ್ಮಾನವಾಗಲಿದೆ.
ಒಂದು ವೇಳೆ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ನಿರ್ಧರಿಸಿದ್ದೇ ಆದಲ್ಲಿ ಇವರಿಬ್ಬರ ಹೆಸರು ಮೊದಲು ಕೇಳಿಬರುತ್ತಿವೆ. ಇವೆಲ್ಲವನ್ನು ಹೈಕಮಾಂಡ್ ಪರಿಶೀಲನೆ ನಡೆಸುತ್ತಿವೆ. ಆದರೆ ಮೊದಲು ಯಡ್ಡಿ ಅವರನ್ನು ಕೆಳಗಿಳಿಸುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ವರಿಷ್ಠರ ಮಾತುಕತೆ ನಡೆಯುತ್ತಿದೆ.
ಸಿಎಂ ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವಾದರೂ ವರಿಷ್ಠರ ಮಾತುಕತೆಯ ನಂತರ ಉಚ್ಚಾಟನೆ ಸಾಧ್ಯತೆ ಇದೆ ಎಂದು ವರದಿಗಳು ಬಹಿರಂಗ ಮಾಡಿವೆ.
ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ... ಅದೇ ಹೊತ್ತಿಗೆ ಇಂದು ಬೆಳಿಗ್ಗೆ ಸಿಎಂ ನಿವಾಸದಲ್ಲಿ ನಡೆದ ಬೆಂಬಲಿಗ ಸಚಿವ, ಸಂಸದರೊಂದಿಗಿನ ಚರ್ಚೆ ಅಂತ್ಯೆಗೊಂಡಿದೆ. ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿರುವ ಮುಖಂಡರು ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಉತ್ತರಿಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರೇ ನಮ್ಮ ನಾಯಕ. ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಪ್ರತಿಪಕ್ಷಗಳು ವಿನಾ ಕಾರಣ ಆರೋಪ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿವೆ. ಹಾಗೆಯೇ ಭಿನ್ನಮತವನ್ನು ಮಾಧ್ಯಮಗಳೇ ಸೃಷ್ಟಿ ಮಾಡುತ್ತಿವೆ ಎಂದು ಆಪಾದಿಸಿದ್ದಾರೆ.
ಇಂದೊಂದು ಸಾಮಾನ್ಯ ಸಭೆಯಾಗಿತ್ತು. ಜಿಲ್ಲಾ ಪಂಚಾಯತ್ ಚುನಾವಣೆ ದೃಷ್ಟಿಯಲ್ಲಿ ಮಾತುಕತೆ ನಡೆದಿದೆ ಎಂದು ಮುಖಂಡರು ಹೇಳಿಕೆ ನೀಡಿದ್ದಾರೆ.