ಇದೀಗ ಬಂದ ಮಾಹಿತಿಗಳ ಪ್ರಕಾರ ಸಿಎಂ ಯಡಿಯೂರಪ್ಪ ರಾಜೀನಾಮೆಗೆ ಬಿಜೆಪಿ ಪಕ್ಷದ ಹೈಕಮಾಂಡ್ ಆಗ್ರಹಿಸಿದೆ. ಆದರೆ ಈ ಬಗ್ಗೆ ಅಧಿಕೃತ ಸೂಚನೆ ಹೊರಬಂದಿಲ್ಲ.
ಬಿಜೆಪಿ ಪಕ್ಷದ ನಿಕಟ ಮೂಲಗಳ ಪ್ರಕಾರ ಸಿಎಂ ಮನವೊಳಿಸುವ ಜವಾಬ್ದಾರಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಹಾಗೂ ವಿ. ಎಸ್. ಆಚಾರ್ಯ ಅವರಿಗೆ ವಹಿಸಿಕೊಡಲಾಗಿದೆ. ಇಂದು ಬೆಳಗ್ಗೆ ನವದೆಹಲಿಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಯಡ್ಡಿ ನಾಯಕತ್ವ ಬದಲಾವಣೆಗೆ ಒಮ್ಮತದ ನಿರ್ಧಾರ ತಳೆಯಲಾಗಿದೆ ಎಂದು ಹೇಳಲಾಗಿದೆ.
ಸಭೆಯಲ್ಲಿ ನಿತಿನ್ ಗಡ್ಕರಿ, ಎಲ್. ಕೆ. ಅಡ್ವಾಣಿ, ಸುಷ್ಮಾ ಸ್ಮರಾಜ್, ರಾಜ್‌ನಾಥ್ ಸಿಂಗ್ ಮತ್ತು ಅರುಣ್ ಜೇಟ್ಲಿರಂತಹ ವರಿಷ್ಠ ಮುಖಂಡರು ಹಾಜರಿದ್ದರು.
ಸೋಮವಾರದಿಂದ ಸಂಸತ್ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಪಕ್ಷದ ಮುಜುಗರಕ್ಕೊಳಗಾಗುವ ಸಾಧ್ಯತೆಯನ್ನು ತಪ್ಪಿಸಿಕೊಳ್ಳಲು ನಾಯಕತ್ವ ಬದಲಾವಣೆ ಅಗತ್ಯವಾಗಿದೆ ಎಂಬ ನಿರ್ಧಾರಕ್ಕೆ ಬಂದಿದೆ.
ನಾನೇ ಸಿಎಂ... ಮತ್ತೊಂದೆಡೆ ನವದೆಹಲಿಯಲ್ಲಿ ಬೆಳವಣಿಗೆ ನಡೆಯುತ್ತಿರುವ ಮಧ್ಯೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಸಿಎಂ ಯಡಿಯೂರಪ್ಪ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಮುಂದಿನ ಎರಡು ವರೆ ವರ್ಷಗಳ ಅವಧಿಯ ವರೆಗೆ ನಾನೇ ಮುಖ್ಯಮಂತ್ರಿಯಾಗಲಿದ್ದೇನೆ ಎಂದವರು ತಿಳಿಸಿದರು.
ಅದೇ ಹೊತ್ತಿಗೆ ಇಂದೇ ದೆಹಲಿಗೆ ಭೇಟಿ ನೀಡಲಿರುವ ಸಿಎಂ, ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಪ್ರಸಕ್ತ ರಾಜ್ಯ ವಿದ್ಯಮಾನಗಳ ಬಗ್ಗೆ ಯಡ್ಡಿಯೂರಪ್ಪ ಸಮಾಲೋಚನೆ ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ರಾಜೀನಾಮೆಗೆ ಹೈಕಮಾಂಡ್ ಬಯಸಲಿದ್ದಾರೆ ಎಂಬ ವರದಿಯು ಕೇಳಿ ಬಂದಿವೆ.