ಭೂಹಗರಣದ ಗಂಭೀರ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರದ ಸಂಸತ್ ಅಧಿವೇಶನ ಆರಂಭವಾಗುವ (11) ಮುನ್ನ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಪಕ್ಷದ ಹೈಕಮಾಂಡ್ ಅಂತಿಮ ಗಡುವು ನೀಡಿರುವುದನ್ನು ನಿರಾಕರಿಸಿದ್ದು, ಏತನ್ಮಧ್ಯೆ ಸಿಎಂ ವಿಧಾನಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ಭಾನುವಾರ ರಾಜ್ಯ ರಾಜಕೀಯದ ಬೆಳವಣಿಗೆಯಲ್ಲಿ ಯಡಿಯೂರಪ್ಪ ತಮ್ಮ ಮುಂದಿನ ಭವಿಷ್ಯದ ಕುರಿತು ಬೆಂಬಲಿಗರೊಂದಿಗೆ ರಸಹ್ಯ ಸ್ಥಳಗಳಲ್ಲಿ ಚರ್ಚೆ ನಡೆಸಿರುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಯಡಿಯೂರಪ್ಪ ಸಿಎಂ ಸ್ಥಾನ ತೊರೆಯಲು ಸಿದ್ದರಾಗದ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗಿಳಿಯಲಾರೆ ಎಂದು ಯಡಿಯೂರಪ್ಪ ಹೈಕಮಾಂಡ್‌ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ ಹೈಕಮಾಂಡ್ ಕೆಳಗಿಳಿಯುವಂತೆ ಸೂಚಿಸಿದ್ದು, ಬದಲಿ ಮುಖ್ಯಮಂತ್ರಿ ಹುಡುಕಾಟದಲ್ಲಿ ತೊಡಗಿದೆ. ಹಾಗಾಗಿ ಈ ಎಲ್ಲಾ ಗೊಂದಲಕ್ಕೆ ಇತಿಶ್ರೀ ಹಾಡಲು ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡುವ ಮೂಲಕ ವರಿಷ್ಠರ ವಿರುದ್ಧ ಬಂಡಾಯ ಏಳಲು ನಿರ್ಧಾರಿಸಿದ್ದಾರೆ ಎನ್ನಲಾಗಿದೆ.
ಬಲಪ್ರದರ್ಶನಕ್ಕೂ ಮುಂದಾಗಿದ್ದ ಸಿಎಂ: ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚಿಸಿದಾಗ ಅದಕ್ಕೆ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿ, ಎಲ್ಲ ಬೆಂಬಲಿಗರನ್ನು ದೆಹಲಿಗೆ ಕರೆದೊಯ್ದು ವರಿಷ್ಠರ ಎದುರು ಬಲಪ್ರದರ್ಶನ ಮಾಡಲು ನಿರ್ಧರಿಸಿದ್ದರು.
ಅದಕ್ಕಾಗಿಯೇ ದೇವನಹಳ್ಳಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಚಿವರು ಮತ್ತು ಶಾಸಕರ ದೆಹಲಿ ಪ್ರಯಾಣಕ್ಕೆ ಟಿಕೆಟ್ ಕೂಡ ಖರೀದಿಸಲಾಗಿತ್ತು. ಆದರೆ ಭಾನುವಾರ ಸಂಜೆ ವೇಳೆಗೆ ಮನಸ್ಸು ಬದಲಿಸಿದ ಮುಖ್ಯಮಂತ್ರಿ ಬೆಂಬಲಿಗರನ್ನು ದೆಹಲಿಗೆ ಕರೆದೊಯ್ಯುವ ಯೋಚನೆ ಕೈಬಿಟ್ಟರು.