ಅಭಿವೃದ್ಧಿಯೇ ನಮ್ಮ ಮಂತ್ರಿ ಎಂದು ಬೊಗಳೆ ಬಿಡುತ್ತಿದ್ದ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ರಾಜ್ಯದ ಮೇಲೆ ಬರೋಬ್ಬರಿ 50 ಸಾವಿರ ಕೋಟಿ ಸಾಲ ಹೊರಿಸಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಈ ಯಡಿಯೂರಪ್ಪ ಅಧಿಕಾರಕ್ಕೆ ಬರುವ ಮುನ್ನ ಕರ್ನಾಟಕದ ಮೇಲಿದ್ದ ಸಾಲದ ಬಾಬತ್ತು 35 ಸಾವಿರ ಕೋಟಿ. ಕೇವಲ ಎರಡೂವರೆ ವರ್ಷದಲ್ಲಿ ಅದು 85 ಸಾವಿರ ಕೋಟಿಗೆ ಏರಿದ್ದು, ಸಾಲ ಮಾಡಿರುವುದೇ ರಾಜ್ಯ ಬಿಜೆಪಿ ಸರಕಾರದ ಸಾಧನೆ ಎಂದು ಟೀಕಿಸಿದರು.
ಗದಗಕ್ಕೆ ತೆರಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ಲೋಕೋಪಯೋಗಿ, ನೀರಾವರಿ, ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ 800 ಕೋಟಿ ರೂ.ಬಿಲ್ ಬಾಕಿ ಇದೆ. ಖಜಾನೆ ಖಾಲಿಯಾಗಿದೆ. ಎಲ್ಲಿಯೂ ಎಲ್‌ಓಸಿ ಪಾಸಾಗುತ್ತಿಲ್ಲ ಎಂದು ದೂರಿದರು.
ಬಿಲ್‌ಗಾಗಿ ಗುತ್ತಿಗೆದಾರರು ಧರಣಿ ಮಾಡುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳು ಬೋರವೆಲ್ ದುರಸ್ತಿಗೆ ಪರದಾಡುತ್ತಿವೆ. ಇದ್ಯಾವುದಕ್ಕೂ ಗಮನ ಕೊಡದ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಕುಟುಂಬದ ಅಭಿವೃದ್ಧಿಯತ್ತ ಗಮಹರಿಸಿದ್ದಾರೆ. ಅವೆಲ್ಲ ಈಗ ಬೆಳಕಿಗೆ ಬರುತ್ತಿದೆ ಎಂದರು.