ದೇಶದ ಇಂದಿನ ರಾಜಕೀಯ ದುಸ್ಥಿತಿಗೆ ಮತ ಚಲಾಯಿಸದ ಪ್ರಜ್ಞಾವಂತ ನಾಗರಿಕರೇ ಕಾರಣ ಎಂದು ಕರ್ನಾಟಕ ವಿಧಾನ ಸಭೆ ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
'ಶಾಸನ ಸಭೆ, ಶಾಸಕರ ನಡವಳಿಕೆ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆ' ಕುರಿತು ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆಯ ಸ್ಥಳೀಯ ಶಾಖೆ, ಜೆಎಸ್ಎಸ್ ಕಾನೂನು ಕಾಲೇಜು (ಸ್ವಾಯತ್ತ) ಹಾಗೂ ಹೊಸದಿಲ್ಲಿಯ ಪಿಆರ್ಎಸ್ ಲೆಜಿಸ್ಲೇಟಿವ್ ರಿಸರ್ಚ್ ಎಂಬ ಸಂಸ್ಥೆ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ವಾತಂತ್ರ್ಯ ನಂತರ ನಡೆದಿರುವ ಎಲ್ಲ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಈ ದೇಶದ ಶ್ರೀ ಸಾಮಾನ್ಯ ಮತದಾರರು ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿ ಹಿಡಿಯುತ್ತಲೇ ಬಂದಿದ್ದಾರೆ. ಅದರ ಪರಿಣಾಮದಿಂದಲೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಇಲ್ಲಿ ಹಿಂಸೆ ನಡೆದಿಲ್ಲ. 1975ರ ನಂತರ ನಡೆದ ಚುನಾವಣೆಯಲ್ಲಿ ಶ್ರೀ ಸಾಮಾನ್ಯರು ತಮ್ಮ ಮತದ ಮೂಲಕವೇ ಕಾಂಗ್ರೆಸ್ ಅನ್ನು ಹೀನಾಯವಾಗಿ ಸೋಲಿಸಿದರು. ಇದೇ ಭಾರತದ ಮತದಾರರ ಹೆಗ್ಗಳಿಕೆ. ಆದರೆ, ಈಗ ಇದಕ್ಕೆ ವ್ಯತಿರಿಕ್ತವಾಗಿ ಸಮಾಜದ ಪ್ರಜ್ಞಾವಂತರು ಮತ ಚಲಾಯಿಸುವುದೇ ಇಲ್ಲ. ಇಂಥವರೂ ಇಂದಿನ ರಾಜಕೀಯ ದುಸ್ಥಿತಿಗೆ ಕಾರಣ. ಸರಿಯಾದ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸುವ ಜವಾಬ್ದಾರಿಯಿಂದ ಮತದಾರರು ನುಣುಚಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.