ಯಡಿಯೂರಪ್ಪ ಈಸ್ ಎ ಬ್ಯಾಡ್ ಮ್ಯಾನ್...! ಹೀಗೆಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಟೀಕಿಸಿದವರು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್. ಅತಿಯಾಸೆಗೆ ಜೋತು ಬಿದ್ದು ಯಡಿಯೂರಪ್ಪ ತನ್ನತನವನ್ನು ಕಳೆದುಕೊಂಡಿದ್ದಾರೆ. ಅವರಿಗೆ ಮನಸ್ಸು ಹಾಗೂ ಬುದ್ದಿಯ ಮೇಲೆ ಹತೋಟಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಾಲದಲ್ಲಿ ಯಡಿಯೂರಪ್ಪ ಕೂಡ ಒಳ್ಳೆಯ ವ್ಯಕ್ತಿಯಾಗಿದ್ದರು. ಹೋರಾಟ, ಸಂಘಟನೆಯಿಂದ ಕಷ್ಟಪಟ್ಟು ಈ ಸ್ಥಾನಕ್ಕೆ ಬಂದು ನಿಂತವರು. ಮೊದಲೆಲ್ಲ ಚೆನ್ನಾಗಿದ್ದ ಯಡಿಯೂರಪ್ಪ ಆಸೆಗೆ ಕಟ್ಟುಬಿದ್ದು. ಕೇವಲ ದುಡ್ಡು ಮಾಡಬೇಕೆಂಬ ಒಂದಂಶದ ಕಾರ್ಯಕ್ರಮ ಹಾಕಿಕೊಂಡು, ರಾಜ್ಯದ ಜನರನ್ನು ಅಕ್ಷರಶಃ ಮರೆತಿದ್ದಾರೆ. ಇಂತಹ ಮುಖ್ಯಮಂತ್ರಿಯನ್ನು ಕಾಣಬೇಕಾಗಿ ಬಂದಿದ್ದು ರಾಜ್ಯದ ಜನತೆಯ ದೌರ್ಭಾಗ್ಯ ಎಂದರು.
ಮನುಷ್ಯನಿಗೆ ಆಸೆ ಸಹಜ. ಅದರಲ್ಲಿಯೂ ರಾಜಕಾರಣಿಗಳಿಗೆ ಆಸೆ ಕೊಂಚ ಜಾಸ್ತಿಯೇ. ಆದರೆ ಅತಿಯಾಸೆ ಒಳ್ಳೆಯದಲ್ಲ. ಮಹಾತ್ಮ ಗಾಂಧೀಜಿಯವರು ಹೇಳಿರುವಂತೆ ಮನುಷ್ಯನಿಗೆ ಆಸೆ ಇರಬೇಕು, ಆದರೆ ಯಾವುದೇ ಕಾರಣಕ್ಕೂ ಲೋಭವಿರಬಾರದು. ಆದರೆ ಈ ಮಾತನ್ನು ಧಿಕ್ಕರಿಸಿ ಯಡಿಯೂರಪ್ಪ ಲೋಭಿಯಾಗಿದ್ದಾರೆ. ಅವರಲ್ಲಿ ಕೆಟ್ಟ ಗುಣಗಳು ತುಂಬಿಕೊಂಡಿವೆ ಎಂದು ಹೇಳಿದರು.
ಅತ್ತರೇ ಸಿಂಪಥಿ ಸಿಗಲ್ಲ ಸ್ವಾಮೀ... ಮುಖ್ಯಮಂತ್ರಿ ಸ್ಥಾನ, ರಾಜ್ಯದ ದೊರೆಗೆ ಸಮಾನ. ಇಂತಹ ಸ್ಥಾನದಲ್ಲಿದ್ದುಕೊಂಡು ಯಡಿಯೂರಪ್ಪ ಕಣ್ಣೀರು ಹಾಕುತ್ತಿರುವುದು ನಾಚಿಕೆಗೇಡಿನ ಸಂಗತಿ. ಮುಖ್ಯಮಂತ್ರಿ ಸ್ಥಾನ ಕಂಡ ಕಂಡವರಿಗೆ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಹೇಗೋ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಂಡಿರುವ ಯಡಿಯೂರಪ್ಪ ಕಣ್ಣೀರು ಹಾಕುವುದರಿಂದ ರಾಜ್ಯಕ್ಕೆ ದಾರಿದ್ರ್ಯ ತಗಲುವ ಸಾಧ್ಯತೆ ಇದೆ. ಈ ಕಾರಣದಿಂದ ಮುಖ್ಯಮಂತ್ರಿಗಳು ಕಂಡ ಕಂಡಲ್ಲಿ ಕಣ್ಣೀರು ಹಾಕುವುದನ್ನು ನಿಲ್ಲಿಸಲಿ ಎಂದರು.
ಮುಖ್ಯಮಂತ್ರಿ ಹೆಣ್ಣುಮಕ್ಕಳಂತೆ ಕಣ್ಣೀರು ಹಾಕುವುದರ ಹಿಂದೆಯೂ ಒಳಮರ್ಮವಿದೆ. ರಾಜ್ಯದ ಜನತೆಯ ಮುಂದೆ ಅತ್ತು ತೋರಿಸಿದ ಮಾತ್ರಕ್ಕೆ ಜನರ ಮನಸ್ಸು ಕರಗಿ ಹೋಗುತ್ತದೆ, ತಾವು ಮಾಡಿದ ತಪ್ಪುಗಳೆಲ್ಲ ಮುಚ್ಚಿ ಹೋಗುತ್ತವೆ ಎಂಬ ಭ್ರಮೆಯಲ್ಲಿ ಯಡಿಯೂರಪ್ಪ ಕಣ್ಣೀರು ಹಾಕುವುದನ್ನು ರೂಢಿಸಿಕೊಂಡಿದ್ದಾರೆ. ಜನರ ಮುಂದೆ ಕಣ್ಣೀರು ಹಾಕಿದ ಮಾತ್ರಕ್ಕೆ ಸಿಂಪಥಿ ಸಿಗಲ್ಲ ಸ್ವಾಮೀ... ಎಂದು ವ್ಯಂಗ್ಯವಾಡಿದರು.