ರಾಜ್ಯ ಬಿಜೆಪಿನಲ್ಲಿ ಭಿನ್ನಮತ ಮುಂದುವರಿಯುತ್ತಿರುವ ನಡುವೆ ಹೇಳಿಕೆ ನೀಡಿರುವ ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ, ರಾಜ್ಯ ಸರಕಾರವನ್ನು ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗೆಯೇ ಪ್ರತಿಪಕ್ಷಗಳ ಯಾವುದೇ ಕುತಂತ್ರ ಫಲಿಸದು ಎಂದು ತಿರುಗೇಟು ನೀಡಿದ್ದಾರೆ.
ವಿರೋಧ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಈಶ್ವರಪ್ಪ, ಜನರಿಂದ ತಿರಸ್ಕರಿಸ್ಪಟ್ಟಿರುವ ಪಕ್ಷಗಳು ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಕೇಳಲು ನಾಚಿಕೆ ಪಡಬೇಕು ಎಂದು ಕಿಡಿ ಕಾರಿದರು.
ದಕ್ಷಿಣ ಭಾರತದ ಬಿಜೆಪಿನ ಮೊದಲ ಸರಕಾರ ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದೆ. ರೆಸಾರ್ಟ್ ರಾಜಕೀಯ ಮಾಡಿರುವ ಅವರಿಗೆ ನೈತಿಕತೆ ಪ್ರಶ್ನಿಸುವ ಹಕ್ಕು ಇದೆಯೇ ಎಂದವರು ಗುಡುಗಿದರು.
ತುರ್ತು ಬುಲಾವ್... ಅದೇ ಹೊತ್ತಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವ ಬಗ್ಗೆ ಭುಗಿಲೆದ್ದಿರುವ ವಿವಾದದ ಕುರಿತು ಚರ್ಚಿಸಲು ದೆಹಲಿಗೆ ತುರ್ತಾಗಿ ಆಗಮಿಸುವಂತೆ ಈಶ್ವರಪ್ಪ ಅವರಲ್ಲಿ ಪಕ್ಷದ ಹೈಕಮಾಂಡ್ ಬುಲಾವ್ ನೀಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಖುದ್ದಾಗಿ ಈಶ್ವರಪ್ಪ ಅವರಿಗೆ ಆಹ್ವಾನ ನೀಡಿದ್ದಾರೆ. ಇದೀಗ ಎರಡನೇ ಬಾರಿ ಈಶ್ವರಪ್ಪ ಅವರಿಗೆ ಬುಲಾವ್ ನೀಡಿದಂತಾಗಿದೆ. ಈ ಹಿಂದೆ ತೆರಳಿದ್ದಾಗ ಯಡಿಯೂರಪ್ಪ ಅವರನ್ನು ಬೆಂಬಲಿಸಿದ್ದ ಈಶ್ವರಪ್ಪ ನಾಯಕತ್ವ ಬದಲಾವಣೆ ಬೇಡ ಎಂದಿದ್ದರು.
ಇಂದು 12ರ ಹೊತ್ತಿಗೆ ಯಡ್ಡಿ ಭವಿಷ್ಯದ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.