ಭೂ ಹಗರಣದಲ್ಲಿ ಸಿಲುಕಿರುವ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರಿಸಿರುವುದು ಬಿಜೆಪಿ ವರಿಷ್ಠರ ನೈತಿಕ ಅಧಃಪತನಕ್ಕೆ ಸಾಕ್ಷಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲು ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪರಮೇಶ್ವರ್, ಭ್ರಷ್ಟ ಮುಖ್ಯಮಂತ್ರಿ ಸಿಎಂ ಕುರ್ಚಿಯಿಂದ ಕೆಳಗಿಳಿಯಬೇಕು ಎಂದು ಎಲ್.ಕೆ.ಅಡ್ವಾಣಿ ಅವರ ಮಾತಿಗೂ ಬೆಲೆ ಕೊಡದ ಯಡಿಯೂರಪ್ಪ ಮತ್ತೆ ಅಧಿಕಾರದಲ್ಲಿ ಮುಂದುವರಿಯುವುದು ರಾಜ್ಯದ ದುರದೃಷ್ಟ ಎಂದರು.
ಅಷ್ಟೇ ಅಲ್ಲ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಸುವ ಮೂಲಕ ಬಿಜೆಪಿ ಹೈಕಮಾಂಡ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ಈ ನಿಟ್ಟಿನಲ್ಲಿ ಹಗರಣಗಳನ್ನು ಬಯಲಿಗೆಳೆದ ಮಾಧ್ಯಮಗಳಿಗೆ ಅವಮಾನ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಭೂ ಹಗರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್, ಕಾಂಗ್ರೆಸ್ ಮುಖ್ಯಮಂತ್ರಿ ವಿರುದ್ಧ ಸಾಕಷ್ಟು ದಾಖಲೆಗಳನ್ನು ಹೊರಹಾಕಿತ್ತು. ಪುತ್ರರ ಹೆಸರಿಗೆ ಬಳ್ಳಾರಿಯ ಗಣಿ ಕಂಪನಿಯೊಂದರಿಂದ ಸುಮಾರು 20 ಕೋಟಿ ರೂಪಾಯಿ ಜಮೆಯಾಗಿರುವ ಬಗ್ಗೆಯೂ ಮಾಧ್ಯಮಗಳು ದಾಖಲೆ ಸಹಿತ ಮಾಹಿತಿಯನ್ನು ಹೊರಹಾಕಿದ್ದವು. ಈ ಸಂದರ್ಭದಲ್ಲಿ ಭೂ ಹಗರಣದ ಆರೋಪದಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಬೇಕು ಎಂದು ವಿಪಕ್ಷಗಳು ಒತ್ತಾಯಿಸಿದ್ದವು.
ರಾಜ್ಯ ರಾಜಕಾರಣದ ಬಿಸಿ ದೆಹಲಿಯಲ್ಲಿಯೂ ಬಿರುಸಿನ ರಾಜಕೀಯ ಚಟುವಟಿಕೆಗೆ ಎಡೆಮಾಡಿಕೊಟ್ಟಿತ್ತು. ಯಡಿಯೂರಪ್ಪ ತಲೆದಂಡದ ಕುರಿತು ಬಿಜೆಪಿ ಹೈಕಮಾಂಡ್ ಸಾಕಷ್ಟು ಕಸರತ್ತು ನಡೆಸಿದ ನಂತರ, ಯಡಿಯೂರಪ್ಪ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯುವ ಬಗ್ಗೆ ನಿರ್ಧಾರ ಕೈಗೊಳ್ಳುವ ಮೂಲಕ ಕಳೆದ ಕೆಲವು ದಿನಗಳಿಂದ ನಡೆದ ರಾಜಕೀಯ ಜಂಗೀಕುಸ್ತಿಗೆ ತೆರೆ ಬಿದ್ದಂತಾಗಿದೆ.
NRB
ಬಿಜೆಪಿಗೆ ತತ್ವ, ಸಿದ್ದಾಂತವೇ ಇಲ್ಲ-ಎಚ್‌ಡಿಕೆ ಬಿಜೆಪಿ ಕಮಾಂಡ್ ಇಲ್ಲದ ಹೈಕಮಾಂಡ್ ಎಂದು ಟೀಕಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಭ್ರಷ್ಟ ಮುಖ್ಯಮಂತ್ರಿಯ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ಹೈಕಮಾಂಡ್‌ಗೆ ಇಲ್ಲ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭ್ರಷ್ಟಾಚಾರ, ಹಗರಣಗಳ ಬಗ್ಗೆ ದಾಖಲೆ ಸಹಿತ ಜನರ ಮುಂದಿಟ್ಟಿದ್ದೇವೆ. ಆದರೆ ಬಿಜೆಪಿಗೆ ಯಾವುದೇ ತತ್ವ, ಸಿದ್ದಾಂತ ಇಲ್ಲ ಎಂಬುದು ಇದೀಗ ಸಾಬೀತಾಗಿದೆ. ಬಿಜೆಪಿಗೆ ಯಾವುದೇ ನೈತಿಕ ಮೌಲ್ಯದ ಅಗತ್ಯವಿಲ್ಲ, ಭ್ರಷ್ಟರನ್ನು ರಕ್ಷಿಸಿ ಅಧಿಕಾರ ನಡೆಸುವುದೇ ಅವರಿಗೆ ಬೇಕಾಗಿದೆ ಎಂದು ಕಿಡಿಕಾರಿದರು.
ಭ್ರಷ್ಟ ಬಿಜೆಪಿ ಸರಕಾರದ ವಿರುದ್ಧದ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಘೋಷಿಸಿರುವ ಕುಮಾರಸ್ವಾಮಿ, ನಾಳೆಯಿಂದಲೇ ಕಾನೂನು ಹೋರಾಟ ಆರಂಭಿಸುವುದಾಗಿ ತಿಳಿಸಿದ್ದಾರೆ. ನಿಜಕ್ಕೂ ಯಡಿಯೂರಪ್ಪ ಅವರಿಗೆ ಮಾನ, ಮರ್ಯಾದೆ ಇದ್ದಿದ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕೆಳಗಿಳಿಯಬೇಕಿತ್ತು ಎಂದು ಅಭಿಪ್ರಾಯವ್ಯಕ್ತಪಡಿಸಿದರು. ಅಲ್ಲದೆ, ದೇವೇಗೌಡರ ಕಾಲದಿಂದ ಇಲ್ಲಿಯವರೆಗೆ ನಡೆದ ಭೂ ಹಗರಣಗಳ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿರುವುದನ್ನು ಸ್ವಾಗತಿಸುವುದಾಗಿ ಹೇಳಿದ ಅವರು, ತನಿಖೆಗೆ ಕೇವಲ ಒಂದು ವರ್ಷ ಅವಧಿ ಗಡುವು ನೀಡಲಾಗಿದೆ. ಇದು ಯಾವಾಗ ಮುಗಿಯುತ್ತದೆ ಎಂಬುದು ಗೊತ್ತಿಲ್ಲ. ಹಾಗಾಗಿ ಲೋಕಾಯುಕ್ತರಿಗೆ ಭೂ ಹಗರಣ ತನಿಖೆ ಮಾಡಲು ಯಾಕೆ ಅವಕಾಶ ನೀಡಿಲ್ಲ ಎಂದು ಪ್ರಶ್ನಿಸಿದರು.