ಅಧಿಕಾರದ ಆಸೆಯಿಂದ ಜೆಡಿಎಸ್ ಜತೆ ಕೈಜೋಡಿಸಿದರೆ, ಬೆಂಗಳೂರಿನ ಕೆಪಿಸಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಬಿ.ಶಿವರಾಂ ಕಾಂಗ್ರೆಸ್ ವರಿಷ್ಠರನ್ನು ಎಚ್ಚರಿಸಿದ್ದಾರೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ವಿರುದ್ಧ ಆರ್ಎಸ್ಎಸ್ ಮುಖಂಡ ಕೆ.ಎಸ್.ಸುದರ್ಶನ್ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡಿಸಿ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, 1989-99ರಲ್ಲಿ ಎರಡು ಬಾರಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಸೋಲಿಸಿದ ಕೀರ್ತಿ ಜಿಲ್ಲೆಯ ಮತದಾರನಿಗೆ ಸಲ್ಲುತ್ತದೆ. ಈ ಸಂಗತಿ ಮನಗಂಡು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮನೋಸ್ಥೈರ್ಯ ತುಂಬುವ ಕೆಲಸ ಮಾಡಬೇಕೇ ಹೊರತು ಜೆಡಿಎಸ್ ಜತೆ ಕೈಜೋಡಿಸಬಾರದು ಎಂದು ಒತ್ತಾಯಿಸಿದರು.
ರಾಜಕೀಯ ಅಸ್ಥಿರತೆ ಲಾಭ ಪಡೆಯಲು ಜೆಡಿಎಸ್ ಜತೆ ಕೈಜೋಡಿಸಿದ್ದೇ ಆದಲ್ಲಿ ಜಿಲ್ಲೆಯಿಂದ 10 ಸಾವಿರಕ್ಕೂ ಹೆಚ್ಚು ಜನ ಬೆಂಗಳೂರಿಗೆ ತೆರಳಿ ಪ್ರತಿಭಟನೆ ನಡೆಸುವ ಮೂಲಕ ವಿರೋಧ ವ್ಯಕ್ತಪಡಿಸುತ್ತೇವೆ ಎಂದರು.
ಬಿಜೆಪಿ ಸರಕಾರದಷ್ಟೇ ಜೆಡಿಎಸ್ ಕೂಡ ಭ್ರಷ್ಟ ಪಕ್ಷ. ಈ ಎರಡು ಸರಕಾರಗಳ ಅವಧಿಯಲ್ಲಿ ಎಷ್ಟೆಷ್ಟು ಭೂಹಗರಣ ನಡೆದಿದೆ ಎಂಬ ದಾಖಲೆ ಕಾಂಗ್ರೆಸ್ ಬಳಿ ಇದೆ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಹಾಗೂ 'ಮಣ್ಣಿನ ಮಕ್ಕಳಾದ' ದೇವೇಗೌಡರ ಕುಟುಂಬಕ್ಕೆ ರೈತರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಮಾಜಿ ಸಚಿವ ಎಚ್.ಡಿ.ರೇವಣ್ಣ ಗುತ್ತಿಗೆದಾರರ ಬಿಲ್ ಪಾವತಿಗಷ್ಟೇ ಸೀಮಿತವಾಗಿದ್ದಾರೆ. ಅತಿವೃಷ್ಟಿಯಿಂದ ಕಂಗಾಲಾಗಿರುವ ರೈತರು, ಜಿಲ್ಲೆಯ ಜನತೆ ಬಗ್ಗೆ ಕನಿಷ್ಠ ಕಾಳಜಿಯೂ ಅವರಿಗಿಲ್ಲ. ತಮ್ಮ ಕುಟುಂಬದ ಆಸ್ತಿ ಉಳಿಸಿಕೊಳ್ಳಲು ನೈಸ್ ವಿರುದ್ಧ ಪ್ರತಿಭಟನೆ ನಡೆಸಿದ ಜೆಡಿಎಸ್ ಬಂಡವಾಳ ರಾಜ್ಯದ ಜನರಿಗೆ ತಿಳಿದಿದೆ ಎಂದು ಆರೋಪಿಸಿದರು.
ರೈತರ ಕೃಷಿಭೂಮಿಯನ್ನು ಕಡಿಮೆ ಬೆಲೆಗೆ ಖರೀದಿಸಿ ತಮ್ಮ ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಂಡ ಜೆಡಿಎಸ್, ಇದೀಗ ಡಿ ನೋಟಿಫಿಕೇಷನ್ ವಿರುದ್ಧ ಸಮರ ಸಾರಿರುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.