ಅಭಿವೃದ್ಧಿ ಹೆಸರಲ್ಲಿ ಸ್ವಾಧೀನ ಮಾಡಿಕೊಂಡ ರೈತರ ಫಲವತ್ತಾದ ಭೂಮಿಯನ್ನು ನಿಗದಿತ ಉದ್ದೇಶಕ್ಕೆ ಬಳಸಿಕೊಳ್ಳಬೇಕು. ಇಲ್ಲವಾದಲ್ಲಿ ಅದಕ್ಕೊಂದು ಹೊಸ ಕಾನೂನು ರಚಿಸುವ ಮೂಲಕ ರೈತರ ಭೂಮಿ ಮರಳಿಸಬೇಕೆಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರೈತರ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಿಗೂ ಸಾಲ ನೀಡಲು ಸಾಲ ನೀತಿ ರೂಪಿಸಿ, ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವಂತಾಗಬೇಕು ಎಂದರು.
ರಾಜ್ಯದಲ್ಲಿ ಸರಕಾರ ಸತ್ತು ಹೋಗಿದೆ. ಬರೀ ಆಂತರಿಕ ಕಚ್ಚಾಟ, ಭ್ರಷ್ಟಾಚಾರ, ಅನಾಚಾರ ಹಾಗೂ ವಾಮಾಚಾರದಲ್ಲೇ ಸಚಿವ ಸಂಪುಟ ಕಾಲ ಹರಣ ಮಾಡುತ್ತಿದೆ. ಪ್ರತಿಪಕ್ಷಗಳು ತಮ್ಮ ಹೊಣೆಗಾರಿಕೆ ಮರೆತು ವೃಥಾ ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಗಣಿಗಾರಿಕೆಯೇ ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ. ಪ್ರತಿಪಕ್ಷಗಳೂ ಇದಕ್ಕೆ ಹೊರತಾಗಿಲ್ಲ. ಅಭಿವೃದ್ಧಿ ಹೆಸರಲ್ಲಿ ರೈತರ ಫಲವತ್ತಾದ ಭೂಮಿ ಪಡೆದು, ಬಂಧುಗಳಿಗೆ ಹಾಗೂ ಪಕ್ಷ ಕಾರ್ಯಕರ್ತರಿಗೆ ನೀಡುವ ದಂಧೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಹೀಗಾಗಿ ರಾಜಕೀಯ ಪಕ್ಷಗಳು ಹಾಗೂ ಸರಕಾರಕ್ಕೆ ಮಾನ ಮರ್ಯಾದೆ ಇಲ್ಲದಂತಾಗಿದೆ ಎಂದರು.
ಒಂದು ಬಾರಿ ನೋಟಿಫಿಕೇಶನ್ ಆದ ಭೂಮಿ ಅದೆಂದಿಗೂ ಡಿನೋಟಿಫಿಕೇಶನ್ ಆಗಬಾರದು. ಒಂದು ವೇಳೆ ಹಾಗಾದರೆ ರೈತರ ಭೂಮಿಯನ್ನು ಅವರಿಗೆ ವಾಪಸ್ ನೀಡಬೇಕು. ಇದ್ಯಾವುದೂ ಆಗದಿದ್ದಲ್ಲಿ ಪುನಃ ಜನಾದೇಶಕ್ಕೆ ತೆರಳಬೇಕೆಂದರು. ಕೇಂದ್ರ ಸರಕಾರವೂ ಇದರಿಂದ ಹೊರತಾಗಿಲ್ಲ. ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆಗೆ ಗುರಿಪಡಿಸಬೇಕು. ಆದರೆ ಶಿಕ್ಷೆಗಳು ಕಾಲ್ಪನಿಕವಾಗಿವೆ. ತನಿಖೆಗಳ ರಾಶಿ ರಾಶಿಯೇ ವಿಧಾನಸಭೆ ಹಾಗೂ ಸಂಸತ್ ಭವನದಲ್ಲಿ ಧೂಳು ತಿನ್ನುತ್ತಿವೆ. ತನಿಖೆ ಹಾಗೂ ಶಿಕ್ಷೆಗಳು ಅರ್ಥವನ್ನೇ ಕಳೆದುಕೊಳ್ಳುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.