'ಯಾವುದೇ ಕ್ಷೇತ್ರದ ಯಾವುದೇ ವ್ಯಕ್ತಿಯಾಗಿರಲಿ ಪ್ರಾಮಾಣಿಕರಾಗಿದ್ದರೆ ಮಾತ್ರ ಬೆಂಬಲಿಸಬೇಕು. ತಪ್ಪು ಮಾಡಿದವರನ್ನು ಸ್ವಾಮೀಜಿಗಳು ಬೆಂಬಲಿಸುವುದು ಸರಿಯಲ್ಲ. ಅಷ್ಟೇ ಅಲ್ಲ ಒಬ್ಬ ವ್ಯಕ್ತಿಗಾಗಿ ಬೀದಿಗಿಳಿಯುವುದು ಸ್ವಾಮೀಜಿಗಳಿಗೆ ಶೋಭೆ ತರುವ ವಿಚಾರ ಅಲ್ಲ' ಎಂದು ಪ್ರವಾಸೋದ್ಯಮ ಸಚಿವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ನಗರದಲ್ಲಿ ಕನಕ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಸ್ವಾಮೀಜಿಗಳಿಗೆ ರಾಜಕೀಯ ವಿಚಾರ ಬೇಕಿಲ್ಲ ಎಂದರು. ಸತ್ಯವಂತರು ಸಮಾಜಕ್ಕೆ ಹೆದರಬೇಕಾದ ಅಗತ್ಯವೂ ಇಲ್ಲ. ಆದರೆ ಸ್ವಾಮೀಜಿಗಳು ಪ್ರಾಮಾಣಿಕ ವ್ಯಕ್ತಿಗಳನ್ನು ಮಾತ್ರ ಬೆಂಬಲಿಸಬೇಕೆ ವಿನಃ, ತಪ್ಪು ಮಾಡಿದವರನ್ನು ಬೆಂಬಲಿಸುವುದು ಸರಿಯಲ್ಲ ಎಂದು ಹೇಳುವ ಮೂಲಕ ರೆಡ್ಡಿ ಸಹೋದರರ ಒಳಗೆ ಹುದುಗಿದ್ದ ಅಸಮಾಧಾನದ ಕಿಡಿಯನ್ನು ಈ ರೀತಿಯಾಗಿ ಹೊರ ಹಾಕಿದ್ದಾರೆ.
ತಮ್ಮ ಭಾಷಣದುದ್ದಕ್ಕೂ ಎಲ್ಲಿಯೂ ಯಡಿಯೂರಪ್ಪ ಅವರ ಹೆಸರನ್ನು ರೆಡ್ಡಿ ಪ್ರಸ್ತಾಸಿಲ್ಲ. ಭೂ ಹಗರಣದ ವಿಚಾರದಲ್ಲಿ ಯಡಿಯೂರಪ್ಪ ಅವರ ತಲೆದಂಡ ತೆಗೆದುಕೊಳ್ಳಲು ಹೈಕಮಾಂಡ್ ಮುಂದಾಗಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಲಿಂಗಾಯಿತ ಮಠಾಧೀಶರು ಯಡಿಯೂರಪ್ಪ ಪರ ಬೆಂಬಲ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೈಬಿಡಬಾರದೆಂದು ಸಲಹೆ ನೀಡಿ, ಒಂದು ವೇಳೆ ಕೈಬಿಟ್ಟರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಆ ನಿಟ್ಟಿನಲ್ಲಿ ಯಡಿಯೂರಪ್ಪ ಪರ ವಕಾಲತ್ತು ವಹಿಸಿದ ಲಿಂಗಾಯಿತ ಸ್ವಾಮೀಜಿಗಳ ಮೇಲೆ ವಾಗ್ದಾಳಿ ನಡೆಸಿರುವ ಅವರು, ರಾಜ್ಯದಲ್ಲಿ ತಪ್ಪು ಮಾಡಿದವರನ್ನು ಬೆಂಬಲಿಸುವ ವಾತಾವರಣ ಸೃಷ್ಟಿಯಾಗಿದೆ ಎಂದರು. ಸ್ವಾಮೀಜಿಗಳು ಧಾರ್ಮಿಕ ಕಾರ್ಯಗಳಲ್ಲಿ ತೊಡಗಬೇಕೆ ವಿನಃ, ರಾಜಕೀಯ ಅವರಿಗೆ ಹೇಳಿಸಿದ್ದಲ್ಲ ಎಂದು ಕಿಡಿಕಾರಿದರು.