ಭ್ರಷ್ಟಾಚಾರದಲ್ಲಿ ಮುಳುಗಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಮುಂದುವರಿಸುವ ಮೂಲಕ ಬಿಜೆಪಿ ಹೈಕಮಾಂಡ್ ದುರ್ಬಲ ಎಂಬುದು ಸಾಬೀತುಗೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಟೀಕಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಹೈಕಮಾಂಡ್ ನಿಲುವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇದು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ದುರ್ದಿನ. ಯಡ್ಡಿಯೂರಪ್ಪ ಕಾನೂನು ಬಾಹಿರ ಕೃತ್ಯಗಳಿಗೆ ಪಕ್ಷದ ಹೈಕಮಾಂಡ್ ಅಧಿಕೃತ ಮುದ್ರೆ ಒತ್ತಿದಂತಾಗಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕ ಹಕ್ಕು ಇದೆಯೇ ಎಂದವರು ಪ್ರಶ್ನಿಸಿದರು.
ಮಾತು ಮುಂದುವರಿಸಿದ ಅವರು ಭೂ ಹಗರಣವನ್ನು ಬಯಲು ಮಾಡಿದ್ದ ಮಾಧ್ಯಮಗಳಿಗೂ ಇದರಿಂದ ಅವಮಾನವಾಗಿದೆ ಎಂದು ಹೇಳಿದರು. ಯಡ್ಡಿಯೂರಪ್ಪ ಅವವ್ಯಹಾರಗಳನ್ನು ಸುದ್ದಿ ವಾಹಿನಿಗಳು ಬಯಲುಗೊಳಿಸಿದ್ದವು. ಆದರೆ ಯಡ್ಡಿ ವಿರುದ್ಧ ಕ್ರಮ ಕೈಗೊಳ್ಳದೇ ಇರುವ ಮೂಲಕ ಮಾಧ್ಯಮಗಳಿಗೂ ಪಕ್ಷ ಅವಮಾನ ಮಾಡಿದಂತಾಗಿದೆ ಎಂದವರು ಟೀಕಿಸಿದರು.
ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಸಾಮರ್ಥ್ಯ ಹೈಕಮಾಂಡ್‌ಗೆ ಇಲ್ಲ ಎಂಬುದು ಸಾಬೀತಾಗಿದೆ. ಇದು ಭವಿಷ್ಯದಲ್ಲಿ ಪಕ್ಷದ ಅಧಃಪತನಕ್ಕೆ ಕಾರಣವಾಗಲಿದೆ. ಸಂಸತ್‌ನಲ್ಲೂ ಇದರ ತೀವ್ರ ಪರಿಣಾಮ ಎದುರಿಸಬೇಕಾಗಿತ್ತು ಎಂದವರು ಎಚ್ಚರಿಕೆ ನೀಡಿದರು.