ಇತ್ತೀಚೆಗಷ್ಟೇ ಖ್ಯಾತ ಸಾಹಿತಿ ದೇಜಗೌ ಅವರು ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದ್ದ ಮಗನ (ಡಾ.ಜೆ.ಶಶಿಧರ ಪ್ರಸಾದ್) ಪರವಾಗಿ ಉಪವಾಸ ಸತ್ಯಾಗ್ರಹ ನಡೆಸಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದೀಗ ಆಸ್ತಿಯಲ್ಲಿ ಪಾಲು ಕೊಡುವಂತೆ ಒತ್ತಾಯಿಸಿ ಅಳಿಯ ಅರವಿಂದ ಗುರೂಜಿ ಸಾಹಿತಿ ಡಾ.ಗೀತಾ ನಾಗಭೂಷಣ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸೋಮವಾರ ರಾತ್ರಿ ಅರವಿಂದ ಹಾಗೂ ಮೂರು ಜನರು ಮನೆಯೊಳಗೆ ನುಗ್ಗಿ ಗೀತಾ ಅವರ ಮೇಲೆ ಹಾಗೂ ಮಗ ಭರತ್ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮೊಮ್ಮಗಳು ಪೂಜಾಗೆ( ಮಗಳು ಕಾವ್ಯಶ್ರಿ ಮತ್ತು ಅರವಿಂದ ಪುತ್ರಿ) ಆಸ್ತಿ ಬರೆದು ಕೊಡುವಂತೆ ಅಳಿಯ ಒತ್ತಾಯಿಸುತ್ತಿದ್ದು, ತಾನು ಅದಕ್ಕೆ ಒಪ್ಪದಿರುವುದೇ ಈ ಹಲ್ಲೆ ನಡೆಸಲು ಕಾರಣ ಎಂದು ದೂರಿನಲ್ಲಿ ಗೀತಾ ತಿಳಿಸಿದ್ದಾರೆ.
ಅಳಿಯನಿಂದ ತಮಗೆ ಜೀವ ಬೆದರಿಕೆ ಇದ್ದರೂ ಕೂಡ ಆರೋಪಿಗಳನ್ನು ಈವರೆಗೂ ಬಂಧಿಸಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಗದಗಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ತಮಗೆ ನೀಡಿದ್ದ 11 ಲಕ್ಷ ರೂಪಾಯಿ ನೀಡಿದ್ದು, ಆ ಹಣ ಕಬಳಿಸಲು ಸಂಚು ನಡೆಸಿದ್ದಾರೆ ಎಂದು ಈ ಸಂದರ್ಭದಲ್ಲಿ ದೂರಿದ್ದಾರೆ.