ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಹಗರಣಗಳ ಮೇಲೆ ಹಗರಣಗಳ ಆರೋಪ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನೇತಾರ ಎಚ್.ಡಿ.ಕುಮಾರಸ್ವಾಮಿ, ತಮ್ಮ ಎರಡನೇ ಪತ್ನಿ ರಾಧಿಕಾ ಹೆಸರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಅಕ್ರಮ ಆಸ್ತಿ ಮಾಡಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರಾಧಿಕಾ ಕುಟುಂಬಿಕರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಮಾಡಿದ್ದಾರೆ. ಅಂದಾಜು 20 ಕೋಟಿ ರೂಪಾಯಿಗಳಷ್ಟು ಮೌಲ್ಯದ ಜಮೀನು ತಮ್ಮದಾಗಿಸಿಕೊಂಡಿರುವರೆಂಬ ಕುರಿತು ಮಾಹಿತಿ ಇದೆ ಎಂದು ಹೇಳಿದರು.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಧಿಕಾ ಕುಟುಂಬಕ್ಕೆ ಇಷ್ಟೊಂದು ಆಸ್ತಿ ಹೇಗೆ ಬಂತು ಎಂದು ಪ್ರಶ್ನಿಸಿರುವ ಅವರು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಚಿತ್ರ ನಟಿ ರಾಧಿಕಾ, ಇತ್ತೀಚೆಗಷ್ಟೇ ತಮ್ಮ ಮಗುವನ್ನು ಮಾಧ್ಯಮಗಳಿಗೆ ತೋರಿಸಿ, ಮಗುವಿನ ಹೆಸರು ಶಮಿಕಾ ಕೆ.ಸ್ವಾಮಿ ಎಂದೂ, ತಾವು ರಾಜಕಾರಣಿಯೊಬ್ಬರನ್ನು ಮದುವೆಯಾಗಿದ್ದು ನಿಜವೆಂದೂ ಹೇಳಿಕೊಂಡಿದ್ದರು.
ನೈತಿಕತೆ ಬಗ್ಗೆ ಆಗಾಗ್ಗೆ ಮುಖ್ಯಮಂತ್ರಿ ಮೇಲೆ ಹರಿಹಾಯುವ ಕುಮಾರಸ್ವಾಮಿ ಅವರು ಮಾಡಿದ್ದು ಇದೇನಾ ಎಂದು ಪ್ರಶ್ನಿಸಿದರ ಕೊಟ್ಟಾರಿ, ಅಗತ್ಯ ಬಂದರೆ ಈ ಬಗ್ಗೆ ಎಲ್ಲ ದಾಖಲೆ ಒದಗಿಸಲು ಬಿಜೆಪಿ ಸಿದ್ಧವಿದೆ ಎಂದಿದ್ದಾರೆ.