'ಇನ್ಮುಂದೆ ಮೊದಲ ಗೌರವ ನಾಡಿನ ಜನತೆಗೆ. ಅಷ್ಟೇ ಅಲ್ಲ ಬಂಧುಗಳನ್ನು ಮತ್ತು ಸ್ವಾರ್ಥಿಗಳನ್ನು ದೂರ ಇಟ್ಟು ನಾಡನ್ನು ಕಟ್ಟುವುದಾಗಿ' ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತೆ ಪಶ್ಚಾತ್ತಾಪದ ನುಡಿಗಳನ್ನಾಡಿದ್ದಾರೆ.
ತಾನು ಮುಖ್ಯಮಂತ್ರಿಯಾಗಿದ್ದ ಅಧಿಕಾರ ಇರುವಾಗ ನನ್ನ ಸುತ್ತ ಸ್ವಾರ್ಥಿಗಳು ಮತ್ತು ಬಂಧುಗಳೇ ಸುತ್ತುವರಿದಿದ್ದರು. ಹಾಗಾಗಿ ನನಗೆ ವಾಸ್ತವಾ ತಿಳಿಯಲು ಸಾಧ್ಯವಾಗಿಲ್ಲ. ಕಳೆದ ಎರಡೂವರೆ ವರ್ಷಗಳ ಕಾಲ ನಡೆದ ಎಲ್ಲ ಘಟನೆಯನ್ನು, ಸ್ವಾರ್ಥಿಗಳ ಕುತಂತ್ರದ ರಾಜಕೀಯದಾಟ ಮನವರಿಕೆ ಆಗಿದೆ ಎಂದು ಗುರುವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.
ಅಧಿಕಾರ ಇದ್ದಾಗ ಎಲ್ಲ ಬಂಧುಗಳು, ಸ್ವಾರ್ಥಿಗಳು ಲಾಭ ಪಡೆಯುತ್ತಾರೆ. ಅದೇ ರೀತಿ ಅಧಿಕಾರ ಹೋಗುತ್ತದೆ ಎಂಬ ಸಂದರ್ಭದಲ್ಲಿ ಕೈಬಿಡುತ್ತಾರೆ ಎಂದು ಪ್ರಸಕ್ತ ರಾಜ್ಯರಾಜಕಾರಣದಲ್ಲಿನ ಬೆಳವಣಿಗೆ ಕುರಿತು ವಿಶ್ಲೇಷಿಸಿದ ಅವರು, ಇನ್ಮುಂದೆ ಅಂತಹ ಸ್ವಾರ್ಥಿಗಳನ್ನ, ಬಂಧುಗಳನ್ನು ದೂರ ಇಟ್ಟು ರಾಜ್ಯದ ಅಭಿವೃದ್ಧಿಗೆ ನಿಸ್ವಾರ್ಥದಿಂದ ದುಡಿಯುವುದಾಗಿ ಹೇಳಿದರು.
ಭೂ ಹಗರಣದ ಸುಳಿಯಲ್ಲಿ ಸಿಲುಕಿ ಬಿಜೆಪಿ ಹೈಕಮಾಂಡ್‌ನಿಂದ ಮೂರನೇ ಬಾರಿ ಜೀವದಾನ ಪಡೆದು ಮುಖ್ಯಮಂತ್ರಿ ಗದ್ದುಗೆಯಲ್ಲಿ ಮುಂದುವರಿದಿರುವ ಯಡಿಯೂರಪ್ಪ ವಿರುದ್ಧ ಬುಧವಾರ ಕನಕ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.
ಒಬ್ಬ ವ್ಯಕ್ತಿಗಾಗಿ ಮಠಾಧೀಶರು ಬೀದಿಗಿಳಿಯುವುದು ಸರಿಯಲ್ಲ. ಯಾವುದೇ ವ್ಯಕ್ತಿ ಇರಲಿ ಆತ ಪ್ರಾಮಾಣಿಕನಾಗಿದ್ದರೆ ಮಾತ್ರ ಆತನನ್ನು ಬೆಂಬಲಿಸಬೇಕು. ಹಾಗಾಗಿ ಮಠಾಧೀಶರಿಗೆ ರಾಜಕಾರಣದ ಅಗತ್ಯವಿಲ್ಲ ಎಂದು ರೆಡ್ಡಿ ಪರೋಕ್ಷವಾಗಿ ಯಡಿಯೂರಪ್ಪ ಬಗ್ಗೆ ಅಸಮಾಧಾನ ಹೊರಹಾಕಿದ್ದರು.