ಗದಗ ಜಿಲ್ಲೆಯ ನೆರೆ ಸಂತ್ರಸ್ತರಿಗೆ ಮಾರ್ಚ್ ಅಂತ್ಯದೊಳಗೆ ಆಸರೆ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ತಾಂತ್ರಿಕ ಕಾರಣಗಳಿಂದಾಗಿ ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವಲ್ಲಿ ವಿಳಂಬವಾಗಿದೆ. ಆದರೆ ಈ ಕಾರ್ಯ ಮತ್ತಷ್ಟು ವಿಳಂಬವಾಗದು. ಮಾರ್ಚ್ ಅಂತ್ಯದೊಳಗಾಗಿ ನೆರೆ ಸಂತ್ರಸ್ತರು ಹೊಸ ಮನೆಗೆ ಕಾಲಿಡಲಿದ್ದಾರೆ ಎಂದುರು.
ತಾವು ಜವಾಬ್ದಾರಿ ನಿರ್ವಹಿಸುತ್ತಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಗುರುತರ ಬದಲಾವಣೆ ತರಲಾಗುವುದು. ಈ ದಿಸೆಯಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. ಅಂಗನವಾಡಿ ಕಾರ್ಯಕರ್ತರ ಸಮಸ್ಯೆ ಪರಿಹರಿಸುವುದರೊಂದಿಗೆ, ಅಂಗನವಾಡಿ ಮಕ್ಕಳಿಗೆ ನೀಡುತ್ತಿರುವ ಆಹಾರದಲ್ಲಿ ಕೆಲ ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.
ಭಾಗ್ಯಲಕ್ಷ್ಮಿ ಯೋಜನೆಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ಮಹತ್ವಾಕಾಂಕ್ಷಿ ಯೋಜನೆ ಇದಾಗಿದ್ದು, ಯೋಜನೆ ಬಗ್ಗೆ ಪ್ರತಿಪಕ್ಷಗಳು ಅಪಸ್ವರ ಎತ್ತಿರುವುದು ಬೇಸರ ತರಿಸಿದೆ. ಈ ಯೋಜನೆಯನ್ನು ಕೆಲ ರಾಜ್ಯಗಳು ಮಾದರಿಯಾಗಿಸಿಕೊಳ್ಳಲಿವೆ ಎಂದರು.