ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವ ದೃಷ್ಟಿಯಿಂದ ಯಾವುದೇ ಕಟ್ಟುಪಾಡು ಅಥವಾ ಮುಲಾಜಿಗೆ ಒಳಗಾಗದ ನಿಷ್ಠಾವಂತ ಕಾರ್ಯಕರ್ತರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಡಿಸಿಸಿ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸದಸ್ಯರು ಮತ್ತು ಬ್ಲಾಕ್ ಕಾಂಗ್ರೆಸ್ ಹೊಸ ಅಧ್ಯಕ್ಷರ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಶೇ.50ರಷ್ಟು ಹೊಸಬರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇವೆ. ವಿದ್ಯಾವಂತರು, ಪೂರ್ಣ ಪ್ರಮಾಣದ ಕಾರ್ಯಕರ್ತರಿಗೆ ಆದ್ಯತೆ ನೀಡಿದ್ದೇವೆ. ಹಿಂದೆ ಆಗಿದ್ದ ತಪ್ಪುಗಳನ್ನು ಸರಿಪಡಿಸಿಕೊಂಡು ಸಾಮಾಜಿಕ ನ್ಯಾಯ ಒದಗಿಸಿದ್ದೇವೆ. ಪಕ್ಷವನ್ನು ಸಂಘಟಿಸಿ ಮತ್ತೆ ಎಲ್ಲ ಮಟ್ಟದಲ್ಲಿ ಅಧಿಕಾರ ಪಡೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಸುಳ್ಯ ಬ್ಲಾಕ್‌ಗೆ ಕ್ರಿಯಾಶೀಲ ವಕೀಲರು ಹಾಗೂ ಪಕ್ಷಕ್ಕಾಗಿ ಶ್ರಮಿಸಿದವರನ್ನೇ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇವೆ. ಅವರ ವಿರುದ್ಧ ಆರೋಪ ಮಾಡುವ ಯಾರೂ ಇಂದಿನ ಸಭೆಗೆ ಬಂದಿಲ್ಲ. ಪುತ್ತೂರಿನಲ್ಲಿ ಈಗಿರುವವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. ಅಲ್ಲಿರುವ ಎರಡೂ ಬಣಗಳು ಒಪ್ಪಿದರೆ ಚುನಾವಣೆ ನಡೆಸಿ ಹೊಸ ಅಧ್ಯಕ್ಷರ ಆಯ್ಕೆ ನಡೆಸುತ್ತೇವೆ ಎಂದು ಅವರು ತಿಳಿಸಿದರು.