ಇಂದಿನ ದಿನಗಳಲ್ಲಿ ದೇವಸ್ಥಾನ, ದೇವರುಗಳ ಹೆಸರಲ್ಲಿ ರಾಜಕಾರಣ ಮಾಡಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪಾದಿಸಿದ್ದು, ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಭೂ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಮಠಾಧೀಶರು ಬೆಂಬಲ ಸೂಚಿಸಿದ್ದರಿಂದ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಕೊಳ್ಳೇಗಾಲದಲ್ಲಿ ಶ್ರೀ ಮಂಠೇಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಇಷ್ಟಾರ್ಥಿ ಸಿದ್ದಿ ಗಣಪತಿ ಮತ್ತು ಪಾರ್ವತಿ ಅಮ್ಮನವರ ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸುತ್ತಾ ಸಿದ್ದು, ದೇವಸ್ಥಾನ ಮತ್ತು ದೇವರುಗಳ ರಾಜಕಾರಣ ಮಾಡುವುದು ಕಳವಳಕಾರಿ ವಿಚಾರ ಎಂದವರು ಹೇಳಿದರು.
ಅದೇ ಹೊತ್ತಿಗೆ ಯಾವುದೇ ಕಾರಣಕ್ಕೂ ಉಡುಪಿಯಲ್ಲಿರುವ ಶ್ರೀ ಕೃಷ್ಣ ಮಂದಿರವನ್ನು ಉಡುಪಿ ಮಠಕ್ಕೆ ಬಿಟ್ಟುಕೊಡಬಾರದು ಎಂದವರು ಹೇಳಿದರು. ಯಾವುದೇ ದೇವಸ್ಥಾನವಾಗಲಿ ಅದು ಒಂದು ಮಠಕ್ಕೆ ಸೀಮಿತವಾಗಬಾರದು ಎಂದವರು ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಒತ್ತಿ ಹೇಳಿದರು.
ದೇವರು ಎಲ್ಲ ಸಮುದಾಯದವರಿಗೆ ಸೇರಿದ್ದಾಗಿದ್ದು, ಅದನ್ನು ಕೇವಲ ಒಂದು ವರ್ಗ ಮತ್ತು ಮಠಕ್ಕೆ ಸೀತಿಮ ಮಾಡಬಾರದು ಎಂದವರು ಸೇರಿಸಿದರು.