ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವಂತೆ ಹೈಕಮಾಂಡ್ ನಿರ್ಧರಿಸಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಧೃತರಾಷ್ಟ್ರರಂತಾಗಿದ್ದು, ನಿತಿನ್ ಗಡ್ಕರಿ ದುರ್ಯೋಧನ ಎಂಬುದಾಗಿ ಟೀಕಿಸಿದ್ದಾರೆ.
'ಅಯ್ಯೋ ದೇವಾ ಎಂತಹ ಮುಖ್ಯಮಂತ್ರಿಯಪ್ಪಾ, ಈ ರಾಜ್ಯದ ಮಾನ ಕಾಪಾಡಿ ಅಪ್ಪಾ ಅಂತ ಬಿಜೆಪಿ ವರಿಷ್ಠರನ್ನು ಕೇಳಿಕೊಳ್ಳುತ್ತೇನೆ' ಎಂದು ನಗು ಮಿಶ್ರಿತವಾಗಿ ತಿರುಗೇಟು ನೀಡಿದ ಅವರು, ಇಷ್ಟೆಲ್ಲಾ ಭ್ರಷ್ಟಾಚಾರ ನಡೆಸಿಯೂ ತಾನು ಯಾವುದೇ ತಪ್ಪು ಮಾಡಿಲ್ಲ ಎನ್ನುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಯಾವುದೇ ನೈತಿಕ ಮೌಲ್ಯ ಇಲ್ಲ ಎಂದು ಖಾಸಗಿ ಟಿವಿ ಚಾನೆಲ್‌ವೊಂದರ ಜತೆ ಮಾತನಾಡುತ್ತ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಗೆ ಯಾವುದೇ ತತ್ವ, ಸಿದ್ದಾಂತ, ಮೌಲ್ಯ ಇಲ್ಲ ಎನ್ನುವುದು ಪಕ್ಷದ ಹೈಕಮಾಂಡ್ ತೀರ್ಮಾನದಿಂದ ಸಾಬೀತಾಗಿದೆ. ಅಷ್ಟೇ ಅಲ್ಲ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಆಪರೇಷನ್ ಕಮಲ ನಡೆಸಿ ಸಮರ್ಥಿಸಿಕೊಂಡ ರೀತಿಯಲ್ಲೇ ಯಡಿಯೂರಪ್ಪ ತನ್ನ ತಲೆದಂಡದ ವಿಚಾರದಲ್ಲಿಯೂ ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನೇ ಬ್ಲ್ಯಾಕ್ ಮೇಲ್ ಮಾಡಿ ಅಧಿಕಾರ ಉಳಿಸಿಕೊಂಡಿದ್ದಾರೆ ಎಂದು ಗೌಡ ಆರೋಪಿಸಿದರು.
ಇಂತಹ ಸುಳ್ಳು ಮತ್ತು ಭ್ರಷ್ಟ ಮುಖ್ಯಮಂತ್ರಿಯನ್ನು ನಾವಾಗಲಿ ಇನ್ನು ಮುಂದಾಗಲಿ ರಾಜ್ಯ ರಾಜಕಾರಣದಲ್ಲಿ ಕಾಣಲು ಸಾಧ್ಯವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ನಾನು ರಾಜ್ಯ ಸರಕಾರ ಉರುಳಿಸೋ ಹುನ್ನಾರ ನಡೆಸಿಲ್ಲ. ಯಾವ ಬಿಜೆಪಿ ಸಂಸದರ ಜತೆಯೂ ಚರ್ಚಿಸಿಲ್ಲ. ಯಡಿಯೂರಪ್ಪಗೆ ಸುಳ್ಳು ಹೇಳೋಕೆ ಚೆನ್ನಾಗಿ ಬರುತ್ತದೆ. ಅದಕ್ಕಾಗಿ ಜನರ ಮುಂದೆ ಕಥೆ ಕಟ್ಟಿ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಅದೇ ರೀತಿ ಭೂ ಹಗರಣಗಳ ಕುರಿತು ನ್ಯಾಯಾಂಗ ತನಿಖೆಗೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿದ ಅವರು, ಹಗರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.