ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವಿಶ್ವಾಸವಿಲ್ಲದಿದ್ರೆ ಸಂಸ್ಥೆ ರದ್ದುಪಡಿಸಿ: ಸಿಎಂ ವಿರುದ್ಧ ಹೆಗ್ಡೆ ಗರಂ (Lokayuktha | Santhosh Hegde | Land Scam | KIADB | Yeddyurappa)
ವಿಶ್ವಾಸವಿಲ್ಲದಿದ್ರೆ ಸಂಸ್ಥೆ ರದ್ದುಪಡಿಸಿ: ಸಿಎಂ ವಿರುದ್ಧ ಹೆಗ್ಡೆ ಗರಂ
ಬೆಂಗಳೂರು, ಶುಕ್ರವಾರ, 26 ನವೆಂಬರ್ 2010( 11:41 IST )
NRB
ಭೂಹಗರಣಕ್ಕೆ ಸಂಬಂಧಿಸಿದಂತೆ ತಾವು ಆರಂಭಿಸಿರುವ ತನಿಖೆ ಪ್ರಗತಿಯಲ್ಲಿರುವಾಗಲೇ ತಮ್ಮ ಸಮ್ಮತಿ ಇಲ್ಲದೇ ನ್ಯಾಯಾಂಗ ತನಿಖೆಗೆ ಆದೇಶಿಸಿರುವ ಸರಕಾರದ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಲೋಕಾಯುಕ್ತ ಸಂತೋಷ್ ಹೆಗ್ಡೆ, ಲೋಕಾಯುಕ್ತ ಸಂಸ್ಥೆ ಮೇಲೆ ವಿಶ್ವಾಸವಿಲ್ಲದಿದ್ದರೆ ರದ್ದುಗೊಳಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಾಯುಕ್ತಕ್ಕೆ ಪರಮಾಧಿಕಾರ ನೀಡುವ ಭರವಸೆಯನ್ನೂ ಸರಕಾರ ಈಡೇರಿಸಿಲ್ಲ. ಇದೀಗ ಕೆಐಎಡಿಬಿ ಸೇರಿದಂತೆ ಇನ್ನಿತರ ಹಗರಣದ ತನಿಖೆಯನ್ನು ಏಕಾಏಕಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ. ಹಾಗಾಗಿ ಸರಕಾರ ಕಾನೂನು ಅರಿತು ನಡೆಯಲಿ ಎಂದು ಸಲಹೆ ನೀಡಿದ್ದಾರೆ. ಈಗಾಗಲೇ ಕೆಐಎಡಿಬಿ ಹಗರಣದ ವಿಚಾರಣೆ ಕೈಗೆತ್ತಿಕೊಂಡು ಮೂರು ತಿಂಗಳಾಗಿದೆ. ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ ಜಗದೀಶ್ ವಿರುದ್ಧ ಎಫ್ಐಆರ್ ದಾಖಲಿಸಿ ಕೋರ್ಟ್‌ಗೆ ಸಲ್ಲಿಸಲಾಗಿದೆ. ಇಂತಹ ಸಂದರ್ಭದಲ್ಲಿ ತಮ್ಮಲ್ಲಿ ಒಂದು ಮಾತು ಕೇಳದೆ ಹಗರಣದ ತನಿಖೆಯನ್ನು ಮತ್ತೊಂದು ಆಯೋಗ ರಚಿಸಿ ಒಪ್ಪಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಅದು ಹಗರಣದ ಆರೋಪಕ್ಕೊಳಗಾದವರಿಂದಲೇ ಆಯೋಗ ರಚನೆಯಾಗಿದೆ ಎಂದು ಟೀಕಿಸಿದರು.
ಅಲ್ಲದೇ ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಗುರುವಾರ ಪತ್ರ ಬರೆದಿರುವ ಲೋಕಾಯುಕ್ತರು, ಭೂ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಕೆಲವು ಪ್ರಕರಣಗಳ ಬಗ್ಗೆ ನಾನು ತನಿಖೆ ನಡೆಸುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ನನ್ನ ಸಮ್ಮತಿ ಇಲ್ಲದೇ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ. ಇದರಿಂದ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 8(2 ಬಿ) ಉಲ್ಲಂಘನೆಯಾಗಿದೆ. ಈ ಬಗ್ಗೆ ವಿವರಣೆ ನೀಡಿ ಎಂದು ಸೂಚನೆ ನೀಡಿದ್ದಾರೆ.
ಇದು ನನ್ನ ಸಂಸ್ಥೆಯ ಗೌರವದ ಪ್ರಶ್ನೆಯಾಗಿದೆ. ಹೇಳದೇ ಕೇಳದೇ ಲೋಕಾಯುಕ್ತ ಅಧಿಕಾರವನ್ನು ಬಹಿರಂಗವಾಗಿ ಹರಣ ಮಾಡಿದ್ದಾರೆ. ಈಗ ನಾನು ಮೌನವಾಗಿದ್ದರೆ ಇದು ಒಂದು ಸಂಪ್ರದಾಯವಾಗಿ ಬೆಳೆಯುತ್ತದೆ ಮುಂದೆ ಬರುವ ಲೋಕಾಯುಕ್ತರು ನನ್ನ ಶಪಿಸುವಂತಾಗುತ್ತದೆ. ಆದ್ದರಿಂದ ನಾನು ಸರಕಾರದ ನಿರ್ಧಾರವನ್ನು ಪ್ರಶ್ನಿಸಿದ್ದೇನೆ ಎಂದು ವಿವರಣೆ ನೀಡಿದ್ದಾರೆ.