ರಾಜ್ಯದಲ್ಲಿ ನಡೆದಿರುವ ಭೂ ಹಗರಣ ತನಿಖೆಗೆ ನೇಮಿಸಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನ್ಯಾ.ಪದ್ಮರಾಜ್ ಕೂಡ ಸರಕಾರದಿಂದ ನಿವೇಶನ ಪಡೆದಿರುವುದಾಗಿ ಆರೋಪಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಅವರು, ನ್ಯಾ.ಪದ್ಮರಾಜ್ ಅವರು ನ್ಯಾಯಾಂಗ ಬಡಾವಣೆಯಲ್ಲಿ ಸರಕಾರದಿಂದ ನಿವೇಶನವನ್ನು ಗಿಟ್ಟಿಸಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಇಂತಹವರಿಂದ ಭೂ ಹಗರಣದ ತನಿಖೆ ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತವಾಗಿ ನಡೆಯಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಭೂ ಹಗರಣದ ತನಿಖೆಗೆ ನೇಮಕಗೊಂಡಿರುವ ನ್ಯಾ.ಪದ್ಮರಾಜ್ ಅವರು ನಿವೇಶನ ಪಡೆದಿರುವ ಬಗ್ಗೆ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ. ಪದ್ಮರಾಜ್ ಅವರು ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂಬುದು ವರದಿಯಲ್ಲೇ ಸಾಬೀತಾಗಿದೆ ಎಂದು ವಿವರಿಸಿರುವ ಕುಮಾರಸ್ವಾಮಿ, ಭೂ ಹಗರಣದ ತನಿಖೆಗೆ ಇಂತಹವರನ್ನು ನೇಮಿಸಿರುವುದು ಯಾವ ಪುರುಷಾರ್ಥಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಕ್ಕಳು ಹಾಗೂ ಸಚಿವರ ವಿರುದ್ಧ ಭೂ ಹಗರಣದ ಆರೋಪ ಕೇಳಿಬಂದಿತ್ತು. ಇದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ವಿವಾದಕ್ಕೂ ಎಡೆಮಾಡಿಕೊಟ್ಟಿತ್ತು. ಆ ಹಿನ್ನೆಲೆಯಲ್ಲಿ ದೇವೇಗೌಡರು ಮುಖ್ಯಮಂತ್ರಿ (1995) ಆಗಿದ್ದ ಕಾಲದಿಂದ 2010ರವರೆಗೆ ನಡೆದಿರುವ ಭೂ ಹಗರಣದ ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾ.ಪದ್ಮರಾಜ್ ನೇತೃತ್ವದ ಆಯೋಗವನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು.
ಆದರೆ ಇದೀಗ ವಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಭೂ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈಗಾಗಲೇ ಕೆಲವು ಪ್ರಕರಣಗಳಲ್ಲಿನ ನ್ಯಾಯಾಂಗ ತನಿಖೆಯ ವರದಿ ಎಷ್ಟು ನಿಷ್ಪಕ್ಷಪಾತವಾಗಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಭೂ ಹಗರಣವನ್ನು ಲೋಕಾಯುಕ್ತಕ್ಕೆ ಒಪ್ಪಿಸಬೇಕೆಂದು ಪಟ್ಟು ಹಿಡಿದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.