ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕುರ್ಚಿ ಉಳಿಸಿಕೊಳ್ಳಲು ಸಿಎಂ ವರಿಷ್ಠರಿಗೆ ಕೊಟ್ಟ ಹಣ ಎಷ್ಟು ಗೊತ್ತಾ? (BJP | Siddaramaiah | KPCC | Gadkhari | Yeddyurappa | Kanaka Jayanthi)
ಕುರ್ಚಿ ಉಳಿಸಿಕೊಳ್ಳಲು ಸಿಎಂ ವರಿಷ್ಠರಿಗೆ ಕೊಟ್ಟ ಹಣ ಎಷ್ಟು ಗೊತ್ತಾ?
ಕೊಳ್ಳೇಗಾಲ, ಶುಕ್ರವಾರ, 26 ನವೆಂಬರ್ 2010( 16:36 IST )
NRB
ಬಿಜೆಪಿ ವರಿಷ್ಠರಿಗೆ 450 ಕೋಟಿ ರೂ. ಬೃಹತ್ ಮೊತ್ತದ ಹಣ ನೀಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಕುರ್ಚಿ ಉಳಿಸಿಕೊಂಡಿದ್ದಾರೆ ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದ್ದಾರೆ.
ಪಟ್ಟಣದಲ್ಲಿ ಕನಕ ಸಮುದಾಯ ಭವನದ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಭೂ ಹಗರಣಗಳ ಸರಮಾಲೆಯನ್ನೇ ಹೊಂದಿರುವ ಯಡಿಯೂರಪ್ಪ ಅವರನ್ನು ಅಧಿಕಾರದಲ್ಲಿ ಮುಂದುವರಿಸಲು ನಿರ್ಧಾರಿಸಿದ ಬಿಜೆಪಿ ವರಿಷ್ಠರ ಕ್ರಮ ಸರಿಯಲ್ಲ. ಇದರಿಂದ ಯಡಿಯೂರಪ್ಪ ಅವರ ಭ್ರಷ್ಟಾಚಾರದಲ್ಲಿ ವರಿಷ್ಠರ ಪಾಲೂ ಇದೆ ಎಂದು ಆಪಾದಿಸಿದರು.
ಒಬ್ಬ ಮುಖ್ಯಮಂತ್ರಿಗೆ ಹೆದರಿ ಆತ ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿದ್ದರೂ ಅಧಿಕಾರದಲ್ಲಿ ಮುಂದುವರಿಯಲು ಬಿಟ್ಟ ಹೈಕಮಾಂಡ್ ಅನ್ನು ನಾನು ಕಂಡಿರಲಿಲ್ಲ. ಎಲ್ಲಾ ಹಗರಣಗಳು ಹಾಗೂ ಭ್ರಷ್ಟಾಚಾರಗಳಿಗೆ ಹೈಕಮಾಂಡ್ ಶರಣಾಗಿದೆ. ಭೂ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಪದ್ಮರಾಜ್ ಅವರನ್ನು ನೇಮಕ ಮಾಡಿರುವುದು ಕಣ್ಣೊರೆಸುವ ಹಾಗೂ ಸಮಾಜವನ್ನು ದಾರಿ ತಪ್ಪಿಸುವ ತಂತ್ರ ಎಂದರು.
1995ರಿಂದ ನಡೆದಿರುವ ಭೂ ಹಗರಣಗಳನ್ನು ತನಿಖೆಗೆ ಒಪ್ಪಿಸಿರುವುದು ತಾವು ಪಾರಾಗುವ ತಂತ್ರ. ಏಕೆಂದರೆ ತನಿಖೆ ಪೂರ್ಣಗೊಳ್ಳಲು 10 ವರ್ಷ ಬೇಕು. ಅಲ್ಲಿಯ ತನಕ ಮೂರು ಸರಕಾರಗಳು ಬಂದು ಹೋಗುತ್ತವೆ. ತನಿಖೆ ಮುಗಿಯುವ ತನಕ ಮುಖ್ಯಮಂತ್ರಿ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.