ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹೈಕಮಾಂಡ್ ಸುಮ್ಮನೆ ಬಿಟ್ಟಿರಬಹುದು. ಆದರೆ ದೇವರು ಮಾತ್ರ ಕ್ಷಮಿಸಲಾರ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂರ್ಯಗ್ರಹಣ (ಜನವರಿ)ದ ಬಳಿಕ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳಲಿರುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮುಂದುವರಿಸಲು ಹೈಕಮಾಂಡ್ ಅನುಮತಿ ನೀಡಿದಂತಾಗಿದೆ. ಇಲ್ಲಿ ನಡೆದಿರುವ ಎಲ್ಲ ಅಕ್ರಮಗಳನ್ನು ಸಕ್ರಮಗೊಳಿಸಲು ಮುದ್ರೆ ಒತ್ತಿರುವ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಕೃಷ್ಣಯ್ಯಶೆಟ್ಟಿ, ರಾಮಚಂದ್ರಗೌಡ, ಅರವಿಂದ ಲಿಂಬಾವಳಿ ಪ್ರಕರಣದಲ್ಲಿ ಆರೋಪ ಬಂದ ತಕ್ಷಣವೇ ರಾಜೀನಾಮೆ ಪಡೆದುಕೊಂಡ ಸಿಎಂಗೆ ಯಾವ ನೈತಿಕತೆಯೂ ಉಳಿದಿಲ್ಲ. ಸ್ವತಃ ಭ್ರಷ್ಟಾಚಾರದಲ್ಲಿ ತೊಡಗಿರುವ ಸಿಎಂ ರಾಜ್ಯದಲ್ಲಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲಿಯೂ ಆಪರೇಷನ್ ಕಮಲ ಮಾಡಿ ಯಶಸ್ವಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಭ್ರಷ್ಟಾಚಾರ ಮಾಡಿದವರಿಗೆ ಮಾತ್ರ ಟಿಕೆಟ್ ಎನ್ನುವುದನ್ನು ಪ್ರಣಾಳಿಕೆಯಲ್ಲಿ ತಿಳಿಸಲಿ ಎಂದು ಲೇವಡಿ ಮಾಡಿದ ರೇವಣ್ಣ, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮರ್ಯಾದೆಯನ್ನು ಬಿಜೆಪಿ ಉಳಿಸಿಕೊಂಡಿಲ್ಲ. ಬೀದಿಯಲ್ಲಿ ಹರಾಜು ಮಾಡಿದೆ ಎಂದರು.
ಭೂ ಹಗರಣದ ಬಗ್ಗೆ ಲೋಕಾಯುಕ್ತ ತನಿಖೆಗಾಗಿ ಈಗಾಗಲೇ ಕಡತಗಳನ್ನು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ. ಆದ್ದರಿಂದ ನ್ಯಾ.ಪದ್ಮರಾಜ ನ್ಯಾಯಾಂಗ ಆಯೋಗದ ಮುಂದೆ ಜೆಡಿಎಸ್ ಹಾಜರಾಗುವುದಿಲ್ಲ. ಸಹಕಾರವನ್ನು ನೀಡುವುದಿಲ್ಲ ಎಂದು ಹೇಳಿದರು.