ಹೈಕಮಾಂಡ್ ನಿರ್ಧಾರಕ್ಕೆ ತಾವು ಬದ್ಧ: ಉಲ್ಟಾ ಹೊಡೆದ ರೆಡ್ಡಿ
ಜಗಳೂರು, ಶುಕ್ರವಾರ, 26 ನವೆಂಬರ್ 2010( 17:07 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಗ್ಗೆ ಬಿಜೆಪಿ ಹೈಕಮಾಂಡ್ ಕೈಗೊಂಡ ನಿರ್ಧಾರಕ್ಕೆ ತಾವು ಬದ್ಧ ಎಂದು ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಪ್ರತಿಕ್ರಿಯೆ ನೀಡುವ ಮೂಲಕ ಉಲ್ಟಾ ಹೊಡೆದಿದ್ದಾರೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಣ್ವಕುಪ್ಪೆ ಗವಿಮಠದಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದರು.
ರಾಜ್ಯದ ಮಠಾಧೀಶರು ಮುಖ್ಯಮಂತ್ರಿಯನ್ನು ಬೆಂಬಲಿಸಿದ್ದಕ್ಕೆ ತಾವು ಆಕ್ಷೇಪ ವ್ಯಕ್ತಪಡಿಸಿದ್ದೀರಲ್ಲ ಎಂಬ ಪ್ರಶ್ನೆಗೆ, 'ನಾನು ಮಠಾಧೀಶರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿಲ್ಲ. ರಾಜಕಾರಣಿಗಳನ್ನು ಒಂದು ಜಾತಿಗೆ ಸೇರಿದವರಂತೆ ಬಿಂಬಿಸಿಕೊಳ್ಳಬಾರದು ಎಂದಿದ್ದೇನೆ. ಬಿಜೆಪಿ ಹೈಕಮಾಂಡ್ ನಿರ್ಣಯದಂತೆ ರಾಜ್ಯದ ಅಭಿವೃದ್ಧಿಗೆ ಜಾತಿಭೇದ ಮರೆತು ಶ್ರಮಿಸಲಾಗುವುದು. ರಾಜಕೀಯ ಪಕ್ಷಗಳಿಗೆ ಸರ್ವರ ಸಹಕಾರ ಅಗತ್ಯವಿದೆ ' ಎಂದರು.
ರೆಡ್ಡಿ ಬೆಂಬಲಿಗರ 8 ಶಾಸಕರು ರಾಜ್ಯ ಸರಕಾರ ಅಸ್ಥಿರಗೊಳಿಸಲು ರಾಜೀನಾಮೆಗೆ ಸಿದ್ಧತೆ ನಡೆಸಿದ್ದಾರೆಯೇ ಎಂಬ ಪ್ರಶ್ನೆಗೆ ಜನಾರ್ದನ ರೆಡ್ಡಿ ಮೌನ ವಹಿಸಿದರು. ಜತೆಯಲ್ಲಿದ್ದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಉತ್ತರಿಸಿ, ಇದು ಕೇವಲ ಮಾಧ್ಯಮಗಳ ಸೃಷ್ಟಿ. ಅಂತಹ ಯಾವುದೇ ವಾತಾವರಣವಿಲ್ಲ ಎಂದು ನಗೆ ಬೀರಿದರು.