ರಾಜ್ಯದಲ್ಲಿನ ಭೂ ಹಗರಣಗಳ ಕುರಿತು ನ್ಯಾಯಾಂಗ ತನಿಖೆಗೆ ಆದೇಶ ನೀಡಿರುವ ಮುಖ್ಯಂತ್ರಿ ಬಿ. ಎಸ್. ಯಡಿಯೂರಪ್ಪ ನಿಲುವನ್ನು ಪ್ರಶ್ನಿಸಿರುವ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಜನತೆಗೆ ಮೋಸ ಮಾಡಿರುವ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಭೂ ಹಗರಣದ ಕುರಿತು ಲೋಕಯುಕ್ತ ತನಿಖೆ ಬದಲು ನ್ಯಾಯಾಂಗ ತನಿಖೆಗೆ ಸಿಎಂ ಆದೇಶ ಹೊರಡಿಸಿದ್ದಾರೆ. ಆರೋಪಿ ಸ್ಥಾನದಲ್ಲಿರುವ ಸಿಎಂ ಅವರೇ ತಮ್ಮ ವಿರುದ್ಧ ದೂರುಗಳ ತನಿಖೆಗೆ ಆದೇಶ ನೀಡುವುದರಲ್ಲಿ ಅರ್ಥವಿಲ್ಲ. ಈ ಮೂಲಕ ಸಿಎಂ ಜನರನ್ನು ಮೋಸ ಮಾಡಲು ಹೊರಟಿದ್ದಾರೆ ಎಂದು ಸಿದ್ದು ತರಾಟೆಗೆ ತೆಗೆದುಕೊಂಡರು. ಮಾತು ಮುಂದುವರಿಸಿದ ಅವರು ಮುಖ್ಯಮಂತ್ರಿ ತಮ್ಮ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ವಿರುದ್ಧ ತೀವ್ರ ಕಿಡಿ ಕಾರಿದ್ದರಲ್ಲದೆ ಭೂ ಹಗರಣಗಳ ತನಿಖೆ ನಡೆಸುತ್ತಿರುವ ಲೋಕಾಯುಕ್ತಗೆ ಪರ್ಯಾಯವಾಗಿ ತನಿಖಾ ಆಯೋಗ ರಚಿಸಿರುವುದರ ಹಿಂದಿನ ಉದ್ದೇಶ ಸ್ಪಷ್ಟಪಡಿಸಬೇಕು ಎಂದು ಹೇಳಿದರು.
15 ವರ್ಷದ ಹಿಂದಿನ ಡಿನೋಟಿಫೈ ಕುರಿತು ನ್ಯಾಯಾಂಗ ತನಿಖೆ ನಡೆಸುವುದಾಗಿ ಸಿಎಂ ಘೋಷಿಸಿದ್ದಾರೆ. ಆದರೆ ಈ ತನಿಖೆ ಪೂರ್ಣಗೊಳ್ಳಲು ಕನಿಷ್ಠ ಹತ್ತು ವರ್ಷವಾದರೂ ಬೇಕು ಎಂದು ಸಿದ್ದು ವ್ಯಂಗ ಮಾಡಿದರು.