ಮೂಲ ಅರ್ಜಿ ತಿದ್ದುಪಡಿಗೆ ಅವಕಾಶ ನೀಡಿದ ಹೈಕೋರ್ಟ್ ತೀರ್ಪಿಗೆ ತಡೆ ನೀಡಬೇಕೆಂದು ಕೋರಿ ಸರಕಾರದ ಮುಖ್ಯ ಸಚೇತಕ ಡಿ.ಎನ್.ಜೀವರಾಜ್ ಹಾಗೂ ಶಾಸಕ ಸಿ.ಟಿ.ರವಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಐವರು ಅನರ್ಹ ಪಕ್ಷೇತರ ಶಾಸಕರಿಗೆ ನೋಟಿಸ್ ಜಾರಿ ಮಾಡಲು ಸೂಚಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಅಲ್ತಾಮಸ್ ಕಬೀರ್ ನೇತೃತ್ವದ ಪೀಠ ಮುಂದಿನ ಆದೇಶದವರೆಗೆ ಪಕ್ಷೇತರರ ಅರ್ಜಿಯ ವಿಚಾರಣೆ ನಡೆಸಬಾರದು ಎಂದು ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ. ಪಕ್ಷೇತರ ಸದಸ್ಯರಾದ ನರೇಂದ್ರ ಸ್ವಾಮಿ, ಶಿವರಾಜ್ ತಂಗಡಗಿ, ಗೂಳಿಹಟ್ಟಿ ಶೇಖರ್, ಡಿ.ಸುಧಾಕರ್ ಹಾಗೂ ವೆಂಕಟರಮಣಪ್ಪ ಅವರಿಗೆ ಈ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ಡಿ.2ಕ್ಕೆ ವಿಚಾರಣೆ ಮುಂದೂಡಿದೆ.
ಅನರ್ಹತೆ ಪ್ರಶ್ನಿಸಿ ಪಕ್ಷೇತರರು ಸಲ್ಲಿಸಿರುವ ಮೂಲ ಅರ್ಜಿಯಲ್ಲಿ ಬಿಜೆಪಿ ತೊರೆದಿಲ್ಲ ಎಂಬ ವಾಕ್ಯಕ್ಕೆ ಬದಲು ಎಂದೂ ಬಿಜೆಪಿ ಸೇರಿಲ್ಲ ಎಂಬ ವಾಕ್ಯ ಸೇರಿಸಲು ಹೈಕೋರ್ಟ್ ಅನುಮತಿ ನೀಡಿತ್ತು. ಇದು ಉದ್ದೇಶಪೂರ್ವಕವಾಗಿ ಆದ ತಪ್ಪಲ್ಲ ಎಂದು ಅರ್ಜಿದಾರರು ವಾದಿಸಿದ್ದರು.
ಸರಕಾರದ ಮುಖ್ಯ ಸಚೇತಕರ ಪರ ಹಾಜರಾದ ವಕೀಲಾರದ ಮುಕುಲ್ ರೋಹಟಗಿ ಮತ್ತು ಭೂಪೇಂದರ್ ಯಾದವ್, ತಿದ್ದುಪಡಿ ಅವಕಾಶ ನೀಡಿರುವುದರಿಂದ ಮೂಲ ಅರ್ಜಿಯ ಸ್ವಭಾವವೇ ಬದಲಾಗುತ್ತದೆ ಎಂದು ವಾದಿಸಿದರು. ಪಕ್ಷೇತರರ ಪರ ವಾದಿಸಿದ ವಕೀಲರಾದ ಪಿ.ಪಿ.ರಾವ್ ಹಾಗೂ ಜಿತೇಂದರ್ ಮಹಾಪಾತ್ರ ಇದು ಉದ್ದೇಶಪೂರ್ವಕವಾಗಿ ಮಾಡಿದ ತಪ್ಪಲ್ಲ ಎಂದು ಪ್ರತಿವಾದ ಮಂಡಿಸಿದ್ದರು.
ಇದು ಗಂಭೀರ ಪರಿಣಾಮ ಉಂಟು ಮಾಡುವುದರಿಂದ ಅರ್ಜಿಯಲ್ಲಿ ಎತ್ತಿರುವ ಪ್ರಶ್ನೆಗಳನ್ನು ನ್ಯಾಯಾಲಯ ಪೂರ್ಣವಾಗಿ ಪರಿಶೀಲಿಸದೆ ಅರ್ಜಿದಾರರ ಮನವಿಯನ್ನ ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಪೀಠದ ಮತ್ತೊಬ್ಬ ನ್ಯಾ.ಸಿರಿಯಾಕ್ ಜೋಸೆಫ್ ಹೇಳಿದರು.