ರಾಜ್ಯ ಬಿಜೆಪಿಯಲ್ಲಿನ ರಾಜಕೀಯ ಗೊಂದಲ ಮುಗಿದರೂ ಕೂಡ, ರಾಜಕೀಯ ಮುಖಂಡರ ಅಸಮಾಧಾನ, ವಾಗ್ದಾಳಿ ಮುಂದುವರಿದಿದೆ. ಇದೀಗ ಸಂಸದ ಅನಂತ್ ಕುಮಾರ್ ನೀಡಿರುವ ಹೇಳಿಕೆ ಬಿಜೆಪಿ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
'ಬಿಹಾರ ರಾಮರಾಜ್ಯವಾಯಿತು, ಕರ್ನಾಟಕ ಲಾಲು ರಾಜ್ಯವಾಯಿತು ಎಂದು ಅನಂತ್ ಕುಮಾರ್ ಅವರು ನೀಡಿರುವ ಹೇಳಿಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪಕ್ಷದಲ್ಲಿ ತೀವ್ರ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.
ಅನಂತ್ ಕುಮಾರ್ ಹೇಳಿಕೆಯನ್ನು ತೀವ್ರವಾಗಿ ಪರಿಗಣಿಸಿರುವ ರಾಜ್ಯ ಕೆಲವು ಮುಖಂಡರು, ಅನಂತ್ ಕುಮಾರ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಬದಲಾಯಿಸುವಂತೆ ದೆಹಲಿ ವರಿಷ್ಠರ ಮೇಲೆ ಒತ್ತಡ ಹೇರಲು ನಿರ್ಧರಿಸಿರುವುದಾಗಿ ಮೂಲವೊಂದು ತಿಳಿಸಿದೆ.
ಪಕ್ಷದಲ್ಲಿ ಉನ್ನತ ಸ್ಥಾನಮಾನ ಹೊಂದಿ, ಸರಕಾರವನ್ನು ಮುಜುಗರ ಪರಿಸ್ಥಿತಿಗೆ ಸಿಲುಕಿಸಿರುವ ಹೇಳಿಕೆ ನೀಡಿರುವ ಬಗ್ಗೆ ಬಿಜೆಪಿ ವಲಯದೊಳಗೆ ವ್ಯಾಪಕ ಟೀಕೆ ವ್ಯಕ್ತವಾಗತೊಡಗಿದೆ.