ಸಿಎಂಗೆ ದೇವರು ಸರ್ಕಸ್‌ನಲ್ಲಿನ ಜೋಕರ್ ಇದ್ದಂತೆ: ಸುಬ್ಬಯ್ಯ
ಬಾಗಲಕೋಟ, ಶನಿವಾರ, 27 ನವೆಂಬರ್ 2010( 15:23 IST )
ಭೂ ಹಗರಣಗಳಲ್ಲಿ ಸಿಲುಕಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬೆಂಬಲಿಸುವವರು ಭ್ರಷ್ಟಾಚಾರದ ಫಲಾನುಭವಿಗಳು ಎಂದು ಮಾಜಿ ಶಾಸಕ, ಹಿರಿಯ ನ್ಯಾಯವಾದಿ ಎ.ಕೆ.ಸುಬ್ಬಯ್ಯ ಟೀಕಿಸಿದ್ದಾರೆ.
ಹಿಂದುಳಿದ ಅಲ್ಪಸಂಖ್ಯಾತ ಸಮಾಜ ಜಾಗೃತಿ ವೇದಿಕೆ ಭಾರತ ಸಂವಿಧಾನ ದಿನವಾಗಿ ನಗರದಲ್ಲಿ ಆಯೋಜಿಸಿದ್ದ 'ಸಂವಿಧಾನದ ಆಶಯಗಳು ಸಾಕಾರಗೊಂಡಿದ್ದೆಷ್ಟು' ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಪ್ರತಿ ವಿಷಯಕ್ಕೂ ಆಣೆ, ಪ್ರಮಾಣ ಮಾಡುವ ಯಡಿಯೂರಪ್ಪ ದೇವರನ್ನು ಸರ್ಕಸ್ ಜೋಕರ್ ಮಾದರಿಯಲ್ಲಿ ಬಳಸಿಕೊಂಡಿದ್ದಾರೆ. ಪುತ್ರನನ್ನು ಚುನಾವಣೆಗೆ ನಿಲ್ಲಿಸುವುದಿಲ್ಲ ಎಂದು ದೇವರ ಮೇಲೆ ಆಣೆ ಮಾಡಿದ್ದ ಸಿಎಂ, ಮಾತು ಬದಲಾಯಿಸಿದರು. ಅವರಿಗೆ ದೇವರ ಬಗ್ಗೆ ಭೀತಿಯೂ ಇಲ್ಲ, ಆಣೆಗಳ ಬಗ್ಗೆ ಭಯವೂ ಇಲ್ಲ. ಲಿಂಗಾಯಿತ ಎಂದು ಹೇಳಿಕೊಳ್ಳುವ ಸಿಎಂ ಮಕ್ಕಳಿಗೆ ರಾಘವೇಂದ್ರ, ವಿಜಯೇಂದ್ರ ಎಂದು ಹೆಸರಿಟ್ಟಿರುವುದೇಕೆ ? ಎಂದು ಪ್ರಶ್ನಿಸಿದರು.
ಸಿಎಂ ಪರ ಮಠಾಧೀಶರು ಬೀದಿಗಿಳಿದು ಹೋರಾಟ ನಡೆಸಿದರು, ಯಡಿಯೂರಪ್ಪ ಅಧಿಕಾರ ವಂಚಿತರಾದರೆ ಇವರನ್ನು ಯಾರೂ ಕೇಳುವುದಿಲ್ಲ. ತಿರುಪತಿ ವೆಂಕಟೇಶ್ವರನಿಗೆ 48 ಕೋಟಿ ರೂ.ಕಿರೀಟವನ್ನು ಸಚಿವರೊಬ್ಬರು(ಜನಾರ್ದನ ರೆಡ್ಡಿ) ದಾನವಾಗಿ ನೀಡಿದರು. ದೇವರ ಮೇಲೆ ನಂಬಿಕೆಯಿದ್ದರೆ ಇವರು ಇಷ್ಟು ಹಣ ಗಳಿಸುತ್ತಿರಲಿಲ್ಲ ಎಂದು ಛೇಡಿಸಿದರು.
ದೇವಾಲಯದಲ್ಲಿರುವ ಪೂಜಾರಿ ದೇವರ ಬಗ್ಗೆ ಜನರಲ್ಲಿ ಭ್ರಮೆ ಹುಟ್ಟಿಸಿ ಜೀವನ ನಡೆಸುತ್ತಾರೆ. ದೇವರ ಮಹಿಮೆ ಕೊಂಡಾಡುವ ಆತ ಹುಂಡಿ ಕಳ್ಳತನ ಮಾಡುತ್ತಾನೆ. ದೇವರಿಲ್ಲ ಎಂಬುದು ಆತನಿಗೆ ಗೊತ್ತಿರುವುದರಿಂದ ಆತ ಜನರ ಭಾವನೆಗಳನ್ನು ಸುಲಭವಾಗಿ ದುರುಪಯೋಗಪಡಿಸಿಕೊಳ್ಳುತ್ತಾನೆ. ಕೆಲವರು ದೇವರನ್ನು ನಂಬಿರುತ್ತಾರೆ, ಹಾಗಾಗಿ ಭಯದಿಂದ ಪ್ರಾಮಾಣಿಕ ಜೀವನ ನಡೆಸುತ್ತಾರೆ. ಇನ್ನು ಕೆಲವರಿಗೆ ದೇವರಿಲ್ಲ ಎಂದು ಗೊತ್ತು, ಆದರೆ ತಮಗೇನಾದರೂ ಆದೀತು ಎಂದು ಕೈ ಮುಗಿಯುತ್ತಾರೆ. ದಿನವಿಡಿ ಹೋಮ, ಹವನ ನಡೆಸುವವರು ದುಷ್ಟರು ಎಂದು ವಿಶ್ಲೇಷಿಸಿದರು.