ಪಕ್ಷ ದ್ರೋಹಿಗಳಿಗೆ ಉಪಚುನಾವಣೆಯಲ್ಲಿ ಪಾಠ ಕಲಿಸಿ: ಈಶ್ವರಪ್ಪ
ವಿಜಾಪುರ, ಶನಿವಾರ, 27 ನವೆಂಬರ್ 2010( 15:26 IST )
ಕ್ಷೇತ್ರದ ಜನತೆಗೆ, ಪಕ್ಷಕ್ಕೆ ಹಾಗೂ ಸರಕಾರಕ್ಕೆ ದ್ರೋಹ ಬಗೆದ ವ್ಯಕ್ತಿಗಳಿಗೆ ಜಿಪಂ, ತಾಪಂ ಹಾಗೂ ಇಂಡಿ ವಿಧಾನಸಭೆ ಕ್ಷೇತ್ರಕ್ಕೆ ನಡೆಯುವ ಮರುಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಕಾರ್ಯಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ.
ಇಂಡಿ ಪಟ್ಟಣದ ಪೊಲೀಸ್ ಪರೇಡ್ ಮೈದಾನದಲ್ಲಿ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ವ್ಯಕ್ತಿಗತ ಶ್ರಮವಿಲ್ಲದೆ, ಪಕ್ಷದ ಚಿಹ್ನೆ ಹಾಗೂ ಕಾರ್ಯಕರ್ತರ ಅವಿರತ ಶ್ರಮದಿಂದ ಡಾ.ಸಾರ್ವಭೌಮ ಬಗಲಿ ಶಾಸಕರಾಗಿ ಆಯ್ಕೆಯಾಗಿದ್ದರು.ಆದರೆ ಜೆಡಿಎಸ್‌ನ ಅಪ್ಪ-ಮಕ್ಕಳ ಮಾತು ಕೇಳಿ ಬಿಜೆಪಿಗಷ್ಟೇ ಅಲ್ಲ, ಕ್ಷೇತ್ರದ ಜನತೆ ಹಾಗೂ ಸರಕಾರಕ್ಕೆ ವಂಚನೆ ಮಾಡಿದ್ದಾರೆ. ಈ ಕ್ಷೇತ್ರಕ್ಕೆ ನಡೆಯುವ ಮರುಚುನಾವಣೆಯಲ್ಲಿ ಕಮಲದ ಚಿಹ್ನೆಗೆ ಮತ ಹಾಕಬೇಕು ಎಂದರು.
ಪಕ್ಷ ವಿರೋಧಿ ಚಟುವಟಿಕೆ ಬಳಿಕ ಡಾ.ಬಗಲಿ ಅನರ್ಹಗೊಂಡಿದ್ದರಿಂದ ಇಂಡಿ ಮತಕ್ಷೇತ್ರ ಕಳೆದೆರಡು ತಿಂಗಳಿಂದ ಅನಾಥವಾಗಿದೆ ಎಂದು ಕೆಲವರು ವೃಥಾ ಆರೋಪ ಮಾಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಕ್ಷೇತ್ರ ಅನಾಥವಾಗಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಮೂವರು ಶಾಸಕರು ಅಹರ್ನಿಶಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಕ್ಷೇತ್ರದ ಜನತೆ ಆತಂಕಗೊಳ್ಳಬೇಕಿಲ್ಲ ಎಂದು ಹೇಳಿದರು.
ಇಂಡಿ ತಾಲೂಕಿನ 44 ಹಳ್ಳಿಗಳು ನಾಗಠಾಣ ಮತಕ್ಷೇತ್ರಕ್ಕೆ, ಬಾಕಿ ಹಳ್ಳಿಗಳು ಸಿಂದಗಿ ಕ್ಷೇತ್ರದಲ್ಲಿ ಹಂಚಿಹೋಗಿವೆ. ಹೀಗಾಗಿ ನಾಗಠಾಣ, ಸಿಂದಗಿ ಹಾಗೂ ವಿಜಾಪುರ ಶಾಸಕರು ಈ ಕ್ಷೇತ್ರದ ಅಭಿವೃದ್ಧಿಗೆ ಗಮನಹರಿಸಿದ್ದಾರೆ. ಈ ಕ್ಷೇತ್ರವನ್ನು ನಾವೆಂದಿಗೂ ಖಾಲಿ ಬಿಡುವುದಿಲ್ಲ. ಎರಡ್ಮೂರು ತಿಂಗಳ ಬಳಿಕ ನೂತನ ಬಿಜೆಪಿ ಶಾಸಕರು ಕ್ಷೇತ್ರದ ಅಭಿವೃದ್ಧಿ ನೋಡಿಕೊಳ್ಳುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ವೃಥಾ ಆರೋಪ ಮಾಡುವವರಿಗೆ ತಿರುಗೇಟು ನೀಡಿದರು.