ಗೌಡರ ಕುಟುಂಬಕ್ಕೆ ಕೋಟ್ಯಂತರ ರೂ.ಆಸ್ತಿ ಹೇಗೆ ಬಂತು?: ಶ್ರೀನಿವಾಸ್
ಹೊಳೆನರಸೀಪುರ, ಶನಿವಾರ, 27 ನವೆಂಬರ್ 2010( 15:28 IST )
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದವರು ಆಲೂಗಡ್ಡೆ, ಭತ್ತ ಬೆಳೆದು ಕೋಟ್ಯಂತರ ರೂ. ಸಂಪಾದಿಸಿದರೇ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ.ಶ್ರೀನಿವಾಸ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು 1962ರಲ್ಲಿ ರಾಜಕೀಯ ಜೀವನಕ್ಕೆ ಬಂದಾಗ ಅವರಿಗೆ ಇದ್ದಿದ್ದು ಕೇವಲ 12-15 ಕುರಿ, ಎರಡು ಎಕರೆ ಹೊಲ, ಒಂದು ಎಕರೆ ತೋಟ. ಆದರೆ, ಇಂದು ಇವರ ಕುಟುಂಬದ ಆರ್ಥಿಕ ವಹಿವಾಟು ಸಾವಿರಾರು ಕೋಟಿ ರೂ. ದಾಟಿದೆ. ಇಷ್ಟೆಲ್ಲ ಹಣ ಎಲ್ಲಿಂದ ಬಂತು? ದೇವೇಗೌಡರ ಕುಟುಂಬದ ಪ್ರತಿಯೊಬ್ಬರೂ ಬೆಂಗಳೂರಿನಲ್ಲಿ 15-20 ಕೋಟಿ ಬೆಲೆ ಬಾಳುವ ಬಂಗಲೆ ಹೊಂದಿದ್ದಾರೆ. ಇದು ಹೇಗೆ ಬಂತು ಎಂದು ಪ್ರಶ್ನಿಸಿದರು.
ಜೆಡಿಎಲ್‌ಪಿ ನಾಯಕ ಎಚ್.ಡಿ.ರೇವಣ್ಣ ಇತ್ತೀಚೆಗೆ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದು, ಬೋಟುಗಳನ್ನು ಹೇಮಾವತಿ ನದಿಯಲ್ಲಿಳಿಸಿ, ದಿನಕ್ಕೆ 150ರಿಂದ 200 ಲಾರಿಗಳಲ್ಲಿ ಮರಳನ್ನು ಬೆಂಗಳೂರು ಮತ್ತಿತರೆಡೆಗೆ ಸಾಗಿಸುತ್ತಿದ್ದಾರೆ. ಪಡುವಲಹಿಪ್ಪೆಯ ತಮ್ಮ ತೋಟದಲ್ಲಿ ಸಾವಿರಾರು ಟನ್ನಷ್ಟು ಮರಳನ್ನು ಅಕ್ರಮವಾಗಿ ಶೇಖರಿಸಿಟ್ಟಿದ್ದಾರೆ ಎಂದು ಆರೋಪಿಸಿದರು.
ಜಿ.ಪಂ. ಮತ್ತು ತಾ.ಪಂ. ಚುನಾವಣೆ ಹಿನ್ನೆಲೆಯಲ್ಲಿ ನಾನಾ ಗ್ರಾಮಗಳಿಗೆ ತೆರಳಿ, ಸರಕಾರದ ಅನುಮತಿ ಇಲ್ಲದ ಕಾಮಗಾರಿಗಳಿಗೆ ರೇವಣ್ಣ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.