2ಜಿ ಸ್ಪೆಕ್ಟ್ರಂ ಮತ್ತು ಕರ್ನಾಟಕ ಭೂ ಹಗರಣ ವಿಷಯದಲ್ಲಿ ಬಿಜೆಪಿ ನಾಯಕರು ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಎನ್.ಧರಂಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟ ಮುಖ್ಯಮಂತ್ರಿ ಹಣೆಪಟ್ಟಿ ಹೊತ್ತಿಕೊಂಡಿರುವ ಬಿ.ಎಸ್.ಯಡಿಯೂರಪ್ಪನವರನ್ನು ಮುಂದುವರಿಸಲು ಎಲ್.ಕೆ.ಅಡ್ವಾಣಿಯಂಥ ಹಿರಿಯ ಮುತ್ಸದ್ದಿಗಳು ಬೆಂಬಲ ನೀಡಿದ್ದು ಖೇದಕರ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಕೆಟ್ಟ ನಿರ್ಧಾರ ಕೈಗೊಳ್ಳುವ ಮೂಲಕ ಬಿಜೆಪಿ ನಾಯಕರು, ಹೈಕಮಾಂಡ್ ಸಮಸ್ತ ಕನ್ನಡಿಗರಿಗೆ ದ್ರೋಹ ಮಾಡಿದೆ ಎಂದು ಹರಿಹಾಯ್ದರು. ಏನೇ ಮಾಡಿದರೂ ಈ ಸರಕಾರ ಏಪ್ರಿಲ್‌ನಲ್ಲಿ ಉರುಳುತ್ತದೆ ಎಂದು ಭವಿಷ್ಯ ನುಡಿದರು.
ಬಿಜೆಪಿಯಂತೆ ಲಜ್ಜೆಗೆಟ್ಟ ಮತ್ತು ನೈತಿಕತೆ ಇಲ್ಲದ ರಾಜಕಾರಣವನ್ನು ಕಾಂಗ್ರೆಸ್ ಮಾಡಿಲ್ಲ. ಆದರ್ಶ ಹಗರಣಕ್ಕೆ ಮಹಾರಾಷ್ಟ್ರ ಸಿಎಂ ತಲೆ ದಂಡ ಪಡೆಯಲಾಗಿದೆ. ಆದರೆ ಈ ಧೈರ್ಯ ಬಿಜೆಪಿಯವರಿಗಿದ್ದರೆ ಯಡಿಯೂರಪ್ಪ ರಾಜೀನಾಮೆ ಪಡೆಯಲಿ ಎಂದು ಸವಾಲು ಹಾಕಿದರು.
ಯಡಿಯೂರಪ್ಪ ಒಂದು ಜಾತಿಗೆ ಮೀಸಲಿದ್ದಂತೆ ಮಾಡುವ ಮೂಲಕ ರಾಜ್ಯದ ಜನತೆಯನ್ನು ಬದಿಗೊತ್ತಿದ್ದಾರೆ. ಅಲ್ಲದೆ ಮಠಾಧೀಶರು ಸಹ ಅಂತಹ ಭ್ರಷ್ಟ ಮುಖ್ಯಮಂತ್ರಿಗೆ ಬೆಂಬಲಿಸಿ ನಿಲ್ಲಬಾರದಾಗಿತ್ತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲವನ್ನು ಮಾಡಿದ ನಂತರ ಮಕ್ಕಳು, ಅಳಿಯಂದಿರನ್ನು ಮನೆಯಿಂದ ಹೊರ ಹಾಕಿದರೆ ಏನು ಫಲ ಎಂದು ಸಿಂಗ್ ಖಾರವಾಗಿ ಪ್ರಶ್ನಿಸಿದರು. ಈಗ ಹೊರ ಹಾಕಿದರೆ ಅಕ್ರಮಗಳಿಗೆ ಕಡಿವಾಣ ಬಿದ್ದಂತೆ ಆಗಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇಬೇಕು ಎಂದು ಹೇಳಿದರು.