ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ವಿರುದ್ಧ ಸೋತ್ರೆ ನೇಣು ಹಾಕ್ಕೊಳ್ತೀನಿ: ಎಚ್‌ಡಿಕೆ
(Yaddyurappa | Kumaraswamy | Land Scam | Karnataka | HDK | Devegowda)
ಯಡಿಯೂರಪ್ಪ ವಿರುದ್ಧ ಸೋತ್ರೆ ನೇಣು ಹಾಕ್ಕೊಳ್ತೀನಿ: ಎಚ್‌ಡಿಕೆ
ಬೆಂಗಳೂರು, ಭಾನುವಾರ, 28 ನವೆಂಬರ್ 2010( 08:39 IST )
PTI
ಕರ್ನಾಟಕದಲ್ಲಿ ನಡೆಯುತ್ತಿರುವ ಭೂಹಗರಣಗಳ ಆರೋಪದ ಯುದ್ಧಕ್ಕೆ ಶನಿವಾರ ಹೊಸ ತಿರುವು ದೊರಕಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮೊಂದಿಗೆ ರಾಜಿ ಸಂಧಾನಕ್ಕೆ ಪ್ರಯತ್ನಿಸಿದ್ದರು ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರಲ್ಲದೆ, ಈ ಹೋರಾಟದಲ್ಲಿ ಯಡಿಯೂರಪ್ಪ ಎದುರು ಮಂಡಿಯೂರುವ ಪರಿಸ್ಥಿತಿ ಬಂದರೆ, ಬಹಿರಂಗವಾಗಿ ನೇಣು ಹಾಕಿಕೊಳ್ಳುವುದಾಗಿ ಹೇಳಿದರು.
"ಎರಡು ದಿನಗಳ ಹಿಂದೆ, ಯಡಿಯೂರಪ್ಪ ಅವರ ಬಲಗೈಯಂತಿದ್ದ ವ್ಯಕ್ತಿಯೊಬ್ಬರು ನನಗೆ ದೂರವಾಣಿ ಕರೆ ಮಾಡಿ, ಮುಖ್ಯಮಂತ್ರಿಯವರು ನಿಮ್ಮೊಂದಿಗೆ ರಾಜಿ ಮಾಡಿಕೊಳ್ಳಲು ಇಚ್ಛಿಸಿದ್ದಾರೆ. ಸರಕಾರದ ದುರಾಡಳಿತವನ್ನು ಬಯಲಿಗೆಳೆಯುವ ಕೃತ್ಯ ನಿಲ್ಲಿಸಿ ಎಂದು ಹೇಳಿದರು" ಎಂದು ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಹೇಳಿದರು.
ಯಡಿಯೂರಪ್ಪ ಅವರು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಮಾಜಿ ಪಿಎಂ ಎಚ್.ಡಿ.ದೇವೇಗೌಡ ಮತ್ತು ಮಗ ಎಚ್.ಡಿ.ಕುಮಾರಸ್ವಾಮಿ ಅವರ ಕಾಲದ ಹಗರಣಗಳನ್ನು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ಮೂಲಕ ಒಂದೊಂದಾಗಿ ಹೊರಗೆಡಹುವ ಯುದ್ಧ ಆರಂಭಿಸಿದ ದಿನವೇ ಕುಮಾರಸ್ವಾಮಿಯ ಈ ಹೇಳಿಕೆ ಹೊರಬಿದ್ದಿದೆ.
ಆದರೆ ತಾನು ದೆಹಲಿಯಲ್ಲಿರುವಾಗ ತನ್ನನ್ನು ರಾಜಿಗಾಗಿ ಫೋನ್ ಮೂಲಕ ಸಂಪರ್ಕಿಸಿದ ಆ ವ್ಯಕ್ತಿ ಯಾರೆಂಬುದನ್ನು ಹೇಳಲು ಕುಮಾರಸ್ವಾಮಿ ನಿರಾಕರಿಸಿದರು. "ಆ ವ್ಯಕ್ತಿ ನನ್ನನ್ನು ಭೇಟಿಯಾಗಲು ವಿಶೇಷ ವಿಮಾನದಲ್ಲಿ ದೆಹಲಿಗೆ ಬರುವವರಿದ್ದರು. ಆದರೆ ರಾಜಿಗೆ ನಾನು ಒಪ್ಪಲಿಲ್ಲ" ಎಂದ ಎಚ್‌ಡಿಕೆ, ಈ ಬಗ್ಗೆ ನನ್ನಲ್ಲಿ ಸಾಕ್ಷ್ಯಾಧಾರಗಳಿವೆ, ಸಮಯ ಬಂದಾಗ ಅದನ್ನು ಬಹಿರಂಗಪಡಿಸುತ್ತೇನೆ ಎಂದು ನುಡಿದರು.
ಗೌಡ ಮತ್ತವರ ಕುಟುಂಬಿಕರು ತನ್ನ ಬಳಿ ಬಂದು ಕ್ಷಮಾಪಣೆ ಕೇಳುವವರೆಗೂ ಅವರ ಹಗರಣಗಳನ್ನು ಒಂದೊಂದಾಗಿ ಬಯಲಿಗೆಳೆಯುತ್ತೇನೆ ಎಂದು ಹಾಸನದಲ್ಲಿ ಘೋಷಿಸಿದ ಯಡಿಯೂರಪ್ಪ ಮೇಲೆ ವಾಗ್ದಾಳಿ ನಡೆಸಿದ ಕುಮಾರ, ನಾವೆಂದೂ ಅಂಗಲಾಚುವುದಿಲ್ಲ. ಅವರು ಮುಂದುವರಿಸಲಿ. ನಾವು ಯಡಿಯೂರಪ್ಪ ವಿರುದ್ಧ ಮತ್ತಷ್ಟು ಸಾಕ್ಷ್ಯಾಧಾರಗಳನ್ನು ಹೊರಗೆಳೆಯುತ್ತೇವೆ ಎಂದರು.
ಅಲ್ಲದೆ, ನಾನೇನಾದರೂ ಯಡಿಯೂರಪ್ಪ ಎದುರು ಕ್ಷಮಾಪಣೆ ಕೇಳುವ ಮತ್ತು ತಲೆ ತಗ್ಗಿಸುವ ಪರಿಸ್ಥಿತಿ ಬಂದರೆ, ಇದೇ ಪಕ್ಷದ ಕಚೇರಿ ಮುಂದೆ ನೇಣು ಹಾಕಿಕೊಳ್ಳುತ್ತೇನೆ ಎಂದೂ ಕುಮಾರಸ್ವಾಮಿ ಗುಡುಗಿದರು.