ಭೂಮಿ ನೋಟಿಫಿಕೇಶನ್ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತವು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯಾದ್ಯಂತ ದಿನಕ್ಕೊಂದರಂತೆ ಭೂಹಗರಣಗಳು ಬಹಿರಂಗವಾಗುತ್ತಿರುವ ಹಿನ್ನೆಲೆಯಲ್ಲಿ ಸರಕಾರವನ್ನು ಆಧೀರಗೊಳಿಸಿವೆ.
ಜೆಡಿಎಸ್ ನಾಯಕ ವೈ.ಎಸ್.ವಿ.ದತ್ತ ರಾಚೇನಹಳ್ಳಿ ಭೂ ನೋಟಿಫಿಕೇಶನ್ ಹಗರಣಕ್ಕೆ ಸಂಬಂಧಿಸಿದಂತೆ ನೀಡಿದ ದೂರಿನ ಹಿನ್ನೆಲೆಯಲ್ಲಿ, ಪ್ರಕರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಮೇಲ್ನೋಟಕ್ಕೆ ಸಾಕ್ಷ್ಯಗಳಿರುವುದರಿಂದ ಈ ನೋಟಿಸ್ ಜಾರಿ ಮಾಡಲಾಗಿದೆ ಎಂದು ಲೋಕಾಯುಕ್ತ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಕೆಐಎಡಿಬಿ ಭೂ ಹಗರಣಕ್ಕೆ ಸಂಬಧಿಸಿ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತಮಗೆ ಪ್ರಾಣ ಬೆದರಿಕೆಯನ್ನು ಒಡ್ಡಲಾಗಿತ್ತು ಎನ್ನುವ ಸಂಗತಿಯನ್ನು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬಹಿರಂಗಪಡಿಸಿದ್ದಾರೆ.
ಪ್ರಾಣ ಬೆದರಿಕೆ ವಿಷಯವನ್ನು ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು.ನನ್ನ ರಕ್ಷಣೆಗೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ,ಕೆಲ ಸಮಯದ ನಂತರ ಹೆಚ್ಚುವರಿ ಪೊಲೀಸರನ್ನು ಹಿಂದಕ್ಕೆ ಪಡೆಯಲಾಯಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ನನ್ನ ವಿರುದ್ಧ ಬಿಜೆಪಿ ಶಾಸಕರು ಧರಣಿ ಮಾಡುವುದಾಗಿ ಹೆದರಿಸಿದ್ದಾರೆ.ಅವರು ನನ್ನ ವಿರುದ್ಧ ಧರಣಿ ಮಾಡಲಿ. ನಾನಂತೂ ಹೆದರುವುದಿಲ್ಲ. ನನ್ನ ಹಣೆಬರಹದಲ್ಲಿದ್ದಂತಾಗುತ್ತದೆ ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.