ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗಿಯಾಗಿದ್ದಾರೆನ್ನಲಾದ ಭೂ ಹಗರಣಗಳ ಕುರಿತಂತೆ ಸರಕಾರದ ನ್ಯಾಯಾಂಗ ತನಿಖೆಯನ್ನು ವಿರೋಧಿಸಿದ ಜೆಡಿಎಸ್, ಕೇಂದ್ರದ ತನಿಖಾ ದಳಕ್ಕೆ ತನಿಖೆ ನಡೆಸುವಂತೆ ಕೋರಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಭೂ ಹಗರಣಗಳ ತನಿಖೆಯನ್ನು ಕೇಂದ್ರದ ತನಿಖಾ ದಳಕ್ಕೆ ಒಪ್ಪಿಸಲು,ಕಾನೂನು ತಜ್ಞರ ಸಲಹೆಗಳನ್ನು ಪಡೆಯುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಜಿಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಎಂದೂ ಕಂಡರಿಯದ ಭೂ ಹಗರಣಗಳು ಬಹಿರಂಗವಾಗಿದ್ದು, ಭ್ರಷ್ಟಾಚಾರ ತಾಂಡವಾಡುತ್ತಿದೆ. ಕುಟುಂಬದ ಸದಸ್ಯರು ಕೂಡಾ ಭಾರಿ ಅವ್ಯವಹಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಯಡಿಯೂರಪ್ಪಹೈಕಮಾಂಡ್ ಬಾಯಿ ಮುಚ್ಚಿಸುವಲ್ಲಿ ಯಶಸ್ವಿಯಾಗಿರಬಹುದು. ಆದರೆ, ಹಗರಣಗಳನ್ನು ಮುಚ್ಚಲು ಸಾಧ್ಯವಿಲ್ಲ. ಹಗರಣಗಳಲ್ಲಿ ಭಾಗಿಯಾದ ಮುಖ್ಯಮಂತ್ರಿ ಕುಟುಂಬ ಜೈಲೇ ಗತಿಯಾಗಿದೆ ಎಂದು ವ್ಯಂಗವಾಡಿದರು.
ಡಿಸೆಂಬರ್ 1ರಿಂದ ಬೀದರ್‌ನಿಂದ ಚಾಮರಾಜನಗರದವರೆಗೆ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿ ದ್ದು, ಪ್ರತಿಭಟನಾ ಯಾತ್ರೆಯಲ್ಲಿ ಮುಖ್ಯಮಂತ್ರಿಗಳ ಹಗರಣಗಳನ್ನು ರಾಜ್ಯದ ಜನತೆಗೆ ಮನದಟ್ಟು ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ನ್ಯಾಯಾಂಗ ತನಿಖೆಗೆ ತಾವು ಸಹಕರಿಸುವುದಿಲ್ಲ. ಜಿಡಿಎಸ್ ಪಕ್ಷ ಈಗಾಗಲೇ ಲೋಕಾಯುಕ್ತಕ್ಕೆ ಭೂ ಹಗರಣಗಳ ಕುರಿತಂತೆ ತನಿಖೆ ನಡೆಸಲು ಒತ್ತಾಯಿಸಿ ದೂರನ್ನು ಸಲ್ಲಿಸಿದೆ ಎಂದು ಹೇಳಿದ್ದಾರೆ.