ಹೈಕಮಾಂಡ್ ನಂತರ ಹೆಗ್ಡೆಗೆ ಸಿಎಂ ಬ್ಲ್ಯಾಕ್ ಮೇಲ್:ಕಾಂಗ್ರೆಸ್
ಬೆಂಗಳೂರು, ಭಾನುವಾರ, 28 ನವೆಂಬರ್ 2010( 16:28 IST )
NRB
ಬಿಜೆಪಿ ಹೈಕಮಾಂಡ್‌ಗೆ ಹುಸಿ ಬೆದರಿಕೆಗಳನ್ನೊಡ್ಡಿ ಕುರ್ಚಿಯನ್ನು ಉಳಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ,ಇದೀಗ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರಿಗೆ ಬ್ಲ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಅದ್ಯಕ್ಷ ಡಾ.ಪರಮೇಶ್ವರ್ ಗಂಭೀರ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಕಳೆದ ಎರಡುವರೆ ವರ್ಷಗಳ ಅವಧಿಯಲ್ಲಿ ನಡೆದಿರುವ ಡಿನೋಟಿಫಿಕೇಶನ್, ಬಿಡಿಎ, ಕೆಐಎಡಿಬಿ ಹಗರಣ, ಮಕ್ಕಳ ಕರ್ಮಕಾಂಡ, ಜಮೀನು ಮಾರಾಟ ಸೇರಿದಂತೆ ಹಲವಾರು ಆಕ್ರಮಗಳನ್ನು ಎಸಗಿದ್ದು, ಲೋಕಾಯುಕ್ತ ಹೆಗಡೆಯವರೇ ತನಿಖೆ ನಡೆಸಬೇಕು ಇದರಲ್ಲಿ ಎರಡು ಮಾತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ 16 ವರ್ಷಗಳ ಅವಧಿಯಲ್ಲಿ ನಡೆದಿರುವ ಭೂ ಹಗರಣಗಳ ತನಿಖೆಯನ್ನು ಸರಕಾರ ಯಾವುದೇ ನ್ಯಾಯಾಂಗ ತನಿಖೆಗೆ ವಹಿಸಲಿ. ಆದರೆ, ಯಡಿಯೂರಪ್ಪ ಅವಧಿಯ ಹಗರಣಗಳನ್ನು ಮಾತ್ರ ಲೋಕಾಯುಕ್ತರೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಎರಡು ತನಿಖೆಗಳ ಮಧ್ಯೆ ಘರ್ಷಣೆ ಉಂಟು ಮಾಡಿ ಆಪಾದನೆಯಿಂದ ಮುಕ್ತವಾಗುವ ಕನಸು ಕಾಣುತ್ತಿದ್ದಾರೆ. ಮುಖ್ಯಮಂತ್ರಿ ಎಂದೋ ರಾಜೀನಾಮೆ ನೀಡಿ ಮನೆಗೆ ಹೋಗಬೇಕಾಗಿತ್ತು.ಭಂಢ ಎಮ್ಮೆ ಚರ್ಮದ ಮುಖ್ಯಮಂತ್ರಿ. ಇಂತಹ ಮುಖ್ಯಮಂತ್ರಿಯನ್ನು ರಾಜ್ಯದ ಜನತೆ ಹಿಂದೆ ನೋಡಿಲ್ಲ. ಮುಂದೆ ನೋಡುವುದೂ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ತರಾಟೆಗೆ ತೆಗೆದುಕೊಂಡರು.