ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮರ ಸಾರಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಜೆಡಿಎಸ್ ಮುಖಂಡ ರೇವಣ್ಣ, ಗೌಡರ ಮೇಲೆ ಸೇಡಿನ ರಾಜಕಾರಣ ಮಾಡಿದವರು ರಾಜಕಾರಣದಲ್ಲಿ ಯಾರೂ ಉಳಿದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇವೇಗೌಡರೊಂದಿಗೆ 25 ವರ್ಷ ರಾಜಕೀಯದ ಅನುಭವ ಪಡೆದಿದ್ದೇನೆ. ಯಡಿಯೂರಪ್ಪ ಅವರಂತೆ ಬೇರೆಯವರ ಕೈಕಾಲು ಕಟ್ಟಿ ಅಧಿಕಾರ ಬಂದವನು ತಾನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರ ಮೇಲೆ ತನಿಖೆಗೆ ಆದೇಶಿಸಿದ್ದ ವೀರೇಂದ್ರ ಪಾಟೀಲರು ಹತ್ತು ತಿಂಗಳಲ್ಲೇ ಅಧಿಕಾರ ಕಳೆದುಕೊಂಡು ಮನೆಗೆ ಹೋದರು. ಹಾಗಾಗಿ ಗೌಡರ ಮೇಲೆ ಸೇಡಿನ ರಾಜಕಾರಣ ಮಾಡುವುದು ಒಳ್ಳೆಯದಲ್ಲ ಎಂಬುದನ್ನು ಯಡಿಯೂರಪ್ಪ ಅರ್ಥ ಮಾಡಿಕೊಳ್ಳಲಿ ಎಂದು ಎಚ್ಚರಿಸಿದರು.
ಯಡಿಯೂರಪ್ಪ ಅವರು ಪ್ರಾಮಾಣಿಕರಾಗಿದ್ದರೆ ಭೂ ಹಗರಣದ ತನಿಖೆಯನ್ನು ಲೋಕಾಯುಕ್ತಕ್ಕೆ ಒಪ್ಪಿಸಲಿ. ಅವರು ಸತ್ಯವಂತರು ಎಂಬುದೇ ಆಗಿದ್ದರೆ ಲೋಕಾಯುಕ್ತ ತನಿಖೆ ನಡೆಸಲು ಮೀನ-ಮೇಷ ಎಣಿಸುವುದು ಏಕೆ ಎಂದು ಪ್ರಶ್ನಿಸಿದ್ದಾರೆ.