ಚರ್ಚ್ ದಾಳಿ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಬಿಡುಗಡೆಗೊಂಡ ನಂತರ ಬಜರಂಗದಳದಿಂದ ದೂರ ಸರಿದ ಮಹೇಂದ್ರ ಕುಮಾರ್ ಇದೀಗ ಜೆಡಿಎಸ್ ಸೇರಲು ನಿರ್ಧರಿಸಿದ್ದಾರೆ.
ಜೆಡಿಎಸ್ ಪಾಳಯ ಸೇರುವ ನಿಟ್ಟಿನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಡಿಸೆಂಬರ್ 6ರಂದು ಬೆಂಗಳೂರಿನಲ್ಲಿ ಜೆಡಿಎಸ್ ಸೇರುವ ಸಾಧ್ಯತೆ ಇದೆ ಎಂದು ಮೂಲವೊಂದು ತಿಳಿಸಿದೆ.
ಸಂಘ ಪರಿವಾರದಲ್ಲಿ ಕಳೆದ 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಮಹೇಂದ್ರ ಕುಮಾರ್, ಹಿಂದುಪರ ಸಂಘಟನೆಗಳ ಧೋರಣೆಗೆ ಬೇಸತ್ತಿರುವ ಅವರು ಜನತಾದಳಕ್ಕೆ ಸೇರುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಸಂಘ ಪರಿವಾರದಲ್ಲಿ ಕೆಲಸ ಮಾಡಿದ ಮಹೇಂದ್ರ ಕುಮಾರ್ ವಿರುದ್ಧ ಈವರೆಗೆ 16 ಕೇಸುಗಳು ದಾಖಲಾಗಿವೆ. ಈ ಮೊಕದ್ದಮೆಗಳೆಲ್ಲ ಯಾವುದೂ ಕೂಡ ವೈಯಕ್ತಿಕವಾಗಿ ದಾಖಲಾಗಿದ್ದಲ್ಲ, ಎಲ್ಲವೂ ಹಿಂದುತ್ವದ ಪರವಾಗಿ ಹೋರಾಟ ನಡೆಸಿದ್ದಕ್ಕೆ ಸಿಕ್ಕ ಪ್ರತಿಫಲವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ರಾಜ್ಯಾದ್ಯಂತ ನಡೆದ ಹಲವು ಚರ್ಚ್ ದಾಳಿ ಪ್ರಕರಣದಲ್ಲಿ ಮಹೇಂದ್ರ ಕುಮಾರ್ ಅವರನ್ನು ಬಂಧಿಸಲಾಗಿತ್ತು.
ಈ ಸಂದರ್ಭದಲ್ಲಿ ಮಹೇಂದ್ರ ಕುಮಾರ್ ಅವರನ್ನು ಎರಡು ದಿನದೊಳಗೆ ಜಾಮೀನಿನ ಮೇಲೆ ಬಿಡುಗಡೆ ಮಾಡುವ ಭರವಸೆ ಮುಖಂಡರಿಂದ ಸಿಕ್ಕಿತ್ತು. ಆದರೆ ಚರ್ಚ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಕೇಸ್ ಹಾಕಲಾಯಿತು. ಈ ಎಲ್ಲಾ ಕೇಸ್‌ಗಳಲ್ಲಿ ಜಾಮೀನು ಪಡೆದು ಹೊರಬರಲು 42 ದಿನಗಳ ಕಾಲ ಮಹೇಂದ್ರ ಕುಮಾರ್ ಜೈಲುವಾಸ ಅನುಭವಿಸಬೇಕಾಯಿತು.
ಇದು ತನ್ನ ಮೇಲೆ ಆಡಳಿತರೂಢ ಬಿಜೆಪಿ ಮತ್ತು ಸಂಘಪರಿವಾರ ಉದ್ದೇಶ ಪೂರ್ವಕವಾಗಿ ಹೂಡಿದ ಪಿತೂರಿ ಎಂದು ದೂರಿದ ಮಹೇಂದ್ರ ಕುಮಾರ್ ಹಿಂದೂಪರ ಸಂಘಟನೆ ಮತ್ತು ಬಿಜೆಪಿಯಿಂದ ದೂರ ಉಳಿದಿದ್ದರು. ಈಗ ಜೆಡಿಎಸ್ ಸೇರಲು ಮುಂದಾಗಿದ್ದಾರೆ.