ಲೋಕಾಯುಕ್ತ ಸಂಸ್ಥೆ ಕಡೆಗಣಿಸಿದ್ರೆ ಬಿಡೋದಿಲ್ಲ: ಸಂತೋಷ್ ಹೆಗ್ಡೆ
ಬೆಂಗಳೂರು, ಸೋಮವಾರ, 29 ನವೆಂಬರ್ 2010( 15:00 IST )
NRB
ಲೋಕಾಯುಕ್ತ ಸಂಸ್ಥೆಯನ್ನು ಕಡೆಗಣಿಸಿದ್ರೆ ಬಿಡುವುದಿಲ್ಲ ಎಂದು ಗುಡುಗಿರುವ ನ್ಯಾ.ಸಂತೋಷ್ ಹೆಗ್ಡೆ, ತಾನು ನಿವೃತ್ತಿಯಾಗುವುದರೊಳಗೆ ಎಲ್ಲ ಪ್ರಕರಣಗಳ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೇ ತಾನು ರಾಜ್ಯದ ಜನರನ್ನು ನಿರಾಸೆಗೊಳಿಸಲಾರೆ ಎಂಬ ಭರವಸೆಯನ್ನೂ ಈ ಸಂದರ್ಭದಲ್ಲಿ ನೀಡಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಹಗರಣ ಮತ್ತು ಕೆಐಎಡಿಬಿಗೆ ಸಂಬಂಧಿಸಿದಂತೆ ಕಾನೂನು ಚೌಕಟ್ಟಿನಲ್ಲಿಯೇ ತನ್ನ ಹೋರಾಟ ಮುಂದುವರಿಸುವುದಾಗಿ ತಿಳಿಸುವ ಮೂಲಕ ಸರಕಾರದ ವಿರುದ್ಧವೇ ಸೆಡ್ಡು ಹೊಡೆದಿದ್ದಾರೆ.
ನನಗೆ ವೈಯಕ್ತಿಕವಾಗಿ ಯಾರ ಮೇಲೂ ದ್ವೇಷವಿಲ್ಲ. ಆದರೆ ಆಡಳಿತಾರೂಢ ಸರಕಾರ ಕಾನೂನು ರೀತಿಯಲ್ಲಿ ನಡೆದುಕೊಳ್ಳಬೇಕು. ದುರಾದೃಷ್ಟವೆಂದರೆ ನನ್ನಲ್ಲಿ ಒಂದು ಮಾತನ್ನೂ ಕೇಳದೆ ಎಲ್ಲ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿರುವುದು ಸರಿಯಲ್ಲ ಎಂದು ಪುನರುಚ್ಚರಿಸಿದರು.
ನನ್ನ ನಿವೃತ್ತಿಗೆ ಇನ್ನು ಕೇವಲ ಏಳು ತಿಂಗಳಷ್ಟೇ ಬಾಕಿ ಉಳಿದಿದೆ. ಹಾಗಾಗಿ ರಾಜ್ಯದ ಜನರಿಗೆ ನಿರಾಸೆಯಾಗದ ರೀತಿಯಲ್ಲಿ ಎಲ್ಲ ಪ್ರಕರಣಗಳನ್ನು ತನಿಖೆ ನಡೆಸಿ ವರದಿ ನೀಡಿಯೇ ಸಂಸ್ಥೆಯಿಂದ ನಿರ್ಗಮಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.
ಏತನ್ಮಧ್ಯೆ ಜೆಡಿಎಸ್ ವಕ್ತಾರ ವೈಎಸ್‌ವಿ ದತ್ತ ಅವರು ರಾಚೇನಹಳ್ಳಿಯಲ್ಲಿನ ಡಿ ನೋಟಿಫಿಕೇಶನ್ ಹಗರಣಕ್ಕೆ ಸಂಬಂಧಿಸಿದಂತೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಮೇಲ್ನೋಟಕ್ಕೆ ಸಾಕ್ಷ್ಯಾಧಾರ ಇರುವುದರಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ ಕೆಐಎಡಿಬಿ ಭೂ ಹಗರಣ ಕುರಿತಂತೆ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ತಮಗೆ ಪ್ರಾಣ ಬೆದರಿಕೆಯನ್ನೂ ಒಡ್ಡಲಾಗಿತ್ತು ಎಂದು ಭಾನುವಾರ ಸುದ್ದಿಗಾರರ ಜತೆ ಮಾತನಾಡುತ್ತ ಬಹಿರಂಗಗೊಳಿಸಿದ್ದರು.