'ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆ ಆರಂಭಿಸಲು ಎಷ್ಟಾದರೂ ಅನುಮತಿ ನೀಡಿ. ಆದರೆ, ಕನ್ನಡ ಮಾಧ್ಯಮದಲ್ಲಿ ಓದಿದವರಿಗಷ್ಟೆ ಕೆಲಸ ಕೊಡಿ' ಎಂದು ರಾಜ್ಯ ಸರಕಾರಕ್ಕೆ ಹಿರಿಯ ಸಾಹಿತಿ ಪ್ರೊ.ದೇ.ಜವರೇಗೌಡ ಅವರು ಸಲಹೆ ನೀಡಿದ್ದಾರೆ.
ದಿ ಇನ್ಸಿಟ್ಯೂಷನ್ ಆಫ್ ಎಂಜಿನಿಯರ್ಸ್ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಇಂಗ್ಲಿಷ್ ವಿರೋಧಿ ಅಲ್ಲ. ಭಾಷೆಯಾಗಿ ಇಂಗ್ಲಿಷ್ ಉಳಿಯಬೇಕು, ಮಾಧ್ಯಮವಾಗಿ ಅಲ್ಲ. ನಾಡು,ನುಡಿ,ಸಂಸ್ಕೃತಿ ನಾಶಕ್ಕೆ ಅದು ಕಾರಣವಾಗಬಾರದು ಎಂದರು.
ಇಂಗ್ಲಿಷ್‌ನಲ್ಲಿರುವ ಸಕಲ ಜ್ಞಾನ ಸಂಪತ್ತು ಕನ್ನಡಕ್ಕೆ ಅನುವಾದವಾಗಬೇಕು. ಭಾಷೆಯಾಗಿ ಇಂಗ್ಲಿಷನ್ನು ಕಲಿಸಬೇಕು. ಆದರೆ, ಜ್ಞಾನ ಸಂಪಾದನೆ ಕನ್ನಡದಲ್ಲಿಯೇ ಆಗಬೇಕು. ಕನ್ನಡದ ಉಳಿವಿಗೆ ಏನಾಗಬೇಕು ಎನ್ನುವ ಕುರಿತು ಸರಕಾರ ತಜ್ಞರ ಸಲಹೆ ಕೇಳಬೇಕು. ಆದರೆ, ನಮ್ಮ ರಾಜಕಾರಣಿಗಳದ್ದು ದಪ್ಪ ಚರ್ಮ.ಎಷ್ಟು ಹೇಳಿದರೂ, ಬೈಯ್ದರೂ ಪ್ರಯೋಜನವಾಗುತ್ತಿಲ್ಲ ಎಂದು ಟೀಕಿಸಿದರು.
ಸರಕಾರ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯಲು ಯಾರಿಗಾದರೂ ಅನುಮತಿ ನೀಡಲಿ. ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸಲಿ. ಜತೆಗೆ, ಸಾಕಷ್ಟು ತೆರಿಗೆ ಹೇರಬೇಕು. ಇಂಗ್ಲಿಷ್‌ನಲ್ಲಿ ಕಲಿತವರಿಗೆ ಉದ್ಯೋಗ ನೀಡಲು ಅಮೆರಿಕ, ಯೂರೋಪ್ ಮತ್ತಿತರ ದೇಶಗಳಿರುವುದರಿಂದ ಕನ್ನಡ ಮಾಧ್ಯಮದಲ್ಲಿ ಪಾಸಾದವರಿಗೆ ಮಾತ್ರ ಕರ್ನಾಟಕದಲ್ಲಿ ಉದ್ಯೋಗ ನೀಡಲಾಗುವುದು ಎಂದು ಘೋಷಿಸಬೇಕು ಎಂದು ಸಲಹೆ ನೀಡಿದರು.