ಬಿಜೆಪಿ ನನ್ನ ಮೇಲೆ ಹೊರಿಸಿದ ಏಳು ಆರೋಪಗಳ ಬಗ್ಗೆ ಲೋಕಾಯುಕ್ತರು ಮೊದಲು ತನಿಖೆ ನಡೆಸಲಿ. ಅದಕ್ಕೂ ಮೊದಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸ್ವಲ್ಪ ದಿನ ಇಂಟೆನ್ಸಿವ್ ಕೇರ್ (ತುರ್ತು ಚಿಕಿತ್ಸೆ ಘಟಕ)ನಲ್ಲಿ ಇಡಲಿ ಎಂದು ವ್ಯಂಗ್ಯವಾಡಿದರು.!
ಈ ಮನವಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರದು. ಲೋಕಾಯುಕ್ತ ಬಗ್ಗೆ ಜನತೆಗೆ ಅಪಾರ ವಿಶ್ವಾಸ ಇದೆ. ಬಿಜೆಪಿಯ ನೆಲಗಳ್ಳರು, ಅಂಕಪಟ್ಟಿ ಟ್ಯಾಪ್ ಮಾಡುವ ಮಂದಿ ಲೋಕಾಯುಕ್ತರ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆ ಮಾಡುತ್ತಾರೆ. ನನ್ನ ವಿರುದ್ಧ ದೂರುಗಳ ಬಗ್ಗೆ ಲೋಕಾಯುಕ್ತರು ಸೂಕ್ತ ತನಿಖೆ ನಡೆಸುತ್ತಿಲ್ಲ ಎನ್ನುತ್ತಿದ್ದಾರೆ. ಆದ್ದರಿಂದ ಲೋಕಾಯುಕ್ತರು ಮೊದಲು ನನ್ನ ವಿರುದ್ಧ ಬಂದಿರುವ ಆರೋಪಗಳ ತನಿಖೆ ನಡೆಸಲಿ ಎಂದರು.
ಮುಖ್ಯಮಂತ್ರಿಗಳು ಲೋಕಾಯುಕ್ತ ವಿರುದ್ಧ ಸಂಘರ್ಷಕ್ಕೆ ಇಳಿಯುವುದು ಥರವಲ್ಲ. ದೇವೇಗೌಡರ ಕುಟುಂಬ ಹಗರಣಗಳ ಬಗ್ಗೆ ಸಿಬಿಐ ತನಿಖೆ ನಡೆಸುವುದಾಗಿ ಹೇಳಿದ್ದಾರೆ ಯಾವುದೇ ತನಿಖೆ ನಡೆಸಿದರೂ ನಾವು ಸಿದ್ಧ. ಅವರ ಮುಂದೆ ಈ ಜನ್ಮದಲ್ಲಿ ಮಂಡಿ ಊರುವುದಿಲ್ಲ, ಮುಂದಿನ ಜನ್ಮದಲ್ಲಿ ಬೇಕಾದರೆ ನೋಡೋಣ ಎಂದು ಸವಾಲು ಎಸೆದರು.
ಕೆಪಿಟಿಸಿಎಲ್ ನೇಮಕ, ಈಜಿಪುರ ಭೂಮಿ, ಗರುಡಾ ಮಾಲ್ ಸಹಿತ ಏಳು ಪ್ರಕರಣಗಳಲ್ಲಿ ಅವ್ಯವಹಾರ ಆಗಿದೆ ಎಂದು ಬಿಜೆಪಿ ಹೇಳಿದೆ. ಆದರೆ ನನ್ನಿಂದ ಅಥವಾ ನನ್ನ ಸಹೋದರರಿಂದ ಕಾನೂನು ಬಾಹಿರ ಕೆಲಸಗಳು ಆಗಿವೆ ಎಂದಾದರೆ ಎಷ್ಟೇ ತನಿಖೆ ನಡೆಸಿ, ಜನತೆ ಮುಂದೆ ಇಡಲಿ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗ ಗರುಡಾಮಾಲ್‌ಗೆ ಭೂಮಿ ಕೊಡಲಾಗಿತ್ತು. ಈಗಿನ ಮುಖ್ಯಮಂತ್ರಿ ಮತ್ತಷ್ಟು ಜಾಗ ನೀಡಿದ್ದಾರೆ. ಇದಕ್ಕೆ ಪೂರಕವಾಗಿ `ಮಂಗಳಾರತಿ ತಟ್ಟೆ ತಂದಾಗ ದಕ್ಷಿಣ ಕೊಡೊದು ಸಹಜ' ಎಂದು ಗರುಡಾ ಮಾಲ್ ಮಾಲೀಕರು ಹೇಳಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಎಷ್ಟು ದಕ್ಷಿಣೆ ಪಡೆದಿದ್ದಾರೆ ಎಂದು ಹೇಳಬೇಕು ಎಂದು ತಿರುಗೇಟು ನೀಡಿದರು.