ರಾಜ್ಯ ಸರಕಾರ ಶೀಘ್ರವೇ ಪತನವಾಗಲಿದ್ದು, ಮೇ ವೇಳೆಗೆ ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಪಿ.ಕೋದಂಡರಾಮಯ್ಯ ಭವಿಷ್ಯ ನುಡಿದಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರಕಾರ ಮತ್ತು ಪಕ್ಷದಲ್ಲಿ ಸಮನ್ವಯದ ಕೊರತೆ ಹಾಗೂ ಸಚಿವ ಜನಾರ್ದನ ರೆಡ್ಡಿ ಹೇಳಿಕೆಗಳಿಂದ ಇದು ಸ್ಪಷ್ಟವಾಗುತ್ತಿದೆ ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮಕ್ಕಳು, ಅಳಿಯ, ಸೊಸೆಯಂದಿರೂ ಸೇರಿದಂತೆ ಸಂಬಂಧಿಕರನ್ನು ದೂರ ಇಡುವುದಾಗಿ ಹೇಳಿದ್ದಾರೆ. ಆದರೆ ಮಗ ಸಂಸದ ರಾಘವೇಂದ್ರ ಯಾವಾಗಲೂ ಅವರ ಜತೆಯಲ್ಲೇ ಇರುತ್ತಾರೆ. ಇದನ್ನು ಟಿವಿಯಲ್ಲಿ ಜನತೆ ನೋಡುತ್ತಿದ್ದಾರೆ. ಇಷ್ಟಕ್ಕೂ ಇಂಥ ಹೇಳಿಕೆಗಳೇ ಬಾಲಿಶ ಎಂದು ಟೀಕಿಸಿದರು.
ಭ್ರಷ್ಟಾಚಾರದಲ್ಲಿ ನಿರತರಾಗಿರುವ ಯಡಿಯೂರಪ್ಪ ಅವರನ್ನು ಹೈಕಮಾಂಡ್ ಮತ್ತೆ ಸಿಎಂ ಆಗಿ ಮುಂದುವರಿಸಿದೆ. ಇವರನ್ನು ಕೆಳಗಿಳಿಸಿದರೆ ಸರಕಾರ ಬಿದ್ದುಹೋಗುತ್ತದೆಂಬ ಭಯ ಕಾಡಿದೆ. ಬಿಜೆಪಿಯಲ್ಲಿ ನೈತಿಕತೆ ಉಳಿದಿಲ್ಲ. ಶಿಸ್ತಿನ ಪಕ್ಷ ಎಂಬುದೆಲ್ಲ ಸುಳ್ಳೆಂದು ನಿರೂಪಿತವಾಗಿದೆ ಎಂದು ಹರಿಹಾಯ್ದರು.
2ಜಿ ತರಂಗಾಂತರ ವಿಷಯದಲ್ಲಿ ಸಚಿವ ರಾಜಾ ರಾಜೀನಾಮೆ ಪಡೆಯಲಾಗಿದೆ. ಸಿಬಿಐ ತನಿಖೆಯೂ ನಡೆಯುತ್ತಿದೆ. ಹೀಗಿದ್ದರೂ ಸಂಸತ್‌ನಲ್ಲಿ ಬಿಜೆಪಿ ಜಂಟಿ ಸದನ ಸಮಿತಿಗೆ ಆಗ್ರಹಿಸುತ್ತ ಕಲಾಪಕ್ಕೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದರು.