ಮುಂಬರುವ ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ ಎದುರಾಗದಂತೆ ಸರಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿರುವುದಾಗಿ ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಜನವರಿಯಿಂದ ಮೇ ತಿಂಗಳವರೆಗೆ ವಿದ್ಯುತ್ ಕಣ್ಣಾಮುಚ್ಚಾಲೆಗೆ ಅವಕಾಶ ನೀಡದೆ ವಿದ್ಯುತ್ ಪೂರೈಸಲಾಗುವುದು. ರಾಜ್ಯದಲ್ಲಿ ಲಭ್ಯವಿರುವ ಜಲವಿದ್ಯುತ್ ಮೂಲಕ 40 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸುವ ಜೊತೆಗೆ ಛತ್ತೀಸ್‌ಗಢದಿಂದ ಪ್ರತಿ ಯೂನಿಟ್‌ಗೆ 4.70 ರೂ.ನಂತೆ ಅಗತ್ಯ ವಿದ್ಯುತ್ ಖರೀದಿಸಿ ಪೂರೈಸಲಾಗುವುದು ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ವಿವರಿಸಿದ್ದಾರೆ.
ಪ್ರಸ್ತುತ ಜಲ ವಿದ್ಯುತ್‌ನಿಂದ 15ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು ಬೇಸಿಗೆಯಲ್ಲಿ 40 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಲಾಗುವುದು ಎಂದು ಹೇಳಿದರು. ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಈಗ ಮಿತವಾಗಿ ಬಳಸಿ ಸಂಗ್ರಹಿಸಲಾಗಿದೆ. ಈ ನೀರನ್ನು ಬೇಸಿಗೆಯಲ್ಲಿ ಹೆಚ್ಚು ವಿದ್ಯುತ್ ಉತ್ಪಾದನೆಗೆ ಬಳಸಲಾಗುವುದು ಎಂದರು.
ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 3 ಪೇಸ್‌ನಲ್ಲಿ 6 ಗಂಟೆ ವಿದ್ಯುತ್ ಅನ್ನು ಕಡ್ಡಾಯವಾಗಿ ಪೂರೈಸಲಾಗುವುದು ಎಂದು ಭರವಸೆ ನೀಡಿದರು. ಜಲ ವಿದ್ಯುತ್ ಜೊತೆಗೆ ಬಳ್ಳಾರಿ, ರಾಯಚೂರು, ಉಡುಪಿ ವಿದ್ಯುತ್ ಘಟಕದಲ್ಲಿ ಯಾವುದೇ ಬಾಧಕವಿಲ್ಲದೆ ವಿದ್ಯುತ್ ಉತ್ಪಾದಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.