ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಏಕವಚನದಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ, ನೂರಾರು ಸಂಖ್ಯೆಯ ಜೆಡಿಎಸ್ ಕಾರ್ಯಕರ್ತರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಬಿ.ಜಿ.ಪುಟ್ಟಸ್ವಾಮಿ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರಲ್ಲದೆ, ಪುಟ್ಟಸ್ವಾಮಿಯ ಮೇಲೂ ಹಲ್ಲೆ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ನೂರಾರು ಸಂಖ್ಯೆಯಲ್ಲಿದ್ದ ಜೆಡಿಎಸ್ ಕಾರ್ಯಕರ್ತರು, ಪುಟ್ಟಸ್ವಾಮಿ ನಿವಾಸದ ಮೇಲೆ ಏಕಾಏಕಿ ದಾಳಿ ನಡೆಸಿ ಕಾರ ಜಖಂಗೊಳಿಸಿ, ಮನೆಯ ಕಾಜಿನ ಕಿಟಿಕಿಗಳನ್ನು ಪುಡಿ ಪುಡಿ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಪುಟ್ಟಸ್ವಾಮಿ ಅವರನ್ನು ವಾಹನದಿಂದ ಕೆಳಗಿಳಿಸಿ ಹಲ್ಲೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಅವರ ರಕ್ಷಣೆಗೆ ಅಂಗರಕ್ಷಕರು ಮತ್ತು ಭದ್ರತಾ ಸಿಬ್ಬಂದಿಗಳು ಆಗಮಿಸಿದಾಗ ಕಿಡಿಗೇಡಿಗಳ ಗುಂಪಿನ ನಡುವೆ ಘರ್ಷಣೆ ನಡೆದಿತ್ತು.
ಈ ಹಲ್ಲೆ ಮತ್ತು ದಾಳಿಯ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬೆಂಬಲಿಗರೇ ಕಾರಣ. ಮನೆ ಮೇಲೆ ದಾಳಿ ಮಾಡಿ, ನನ್ನ ಕೊಲೆ ಮಾಡಲೆತ್ನಿಸಿದ್ದಾರೆ. ಅಂಗರಕ್ಷಕರ ನೆರವಿನಿಂದ ನಾನು ಪ್ರಾಣಾಪಾಯದಿಂದ ಪಾರಾದೆ. ಜೆಡಿಎಸ್ ಮುಖಂಡರು ಈ ರೀತಿ ಕೀಳು ಮಟ್ಟದ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು ಎಂದು ಪುಟ್ಟಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಘಟನೆಯಂದ ಆತಂಕಗೊಂಡ ಪುಟ್ಟಸ್ವಾಮಿ, ಕೂಡಲೇ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸುಮಾರು 24 ಮಂದಿ ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಪುಟ್ಟಸ್ವಾಮಿ ಅವರ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀವ್ರವಾಗಿ ಖಂಡಿಸಿದ್ದಾರೆ.
ಹಿನ್ನೆಲೆ: ದೇವೇಗೌಡರ ಕುಟುಂಬ ಹಾಸನ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ನೂರಾರು ಎಕರೆ ಭೂಮಿಯನ್ನು ಸಂಪಾದಿಸಿರುವುದಾಗಿ ಪುಟ್ಟಸ್ವಾಮಿ ಅವರು ದಾಖಲೆ ಬಿಡುಗಡೆ ಮಾಡಿರುವ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕುಮಾರಸ್ವಾಮಿ ಅವರನ್ನು ಮಾಧ್ಯಮವೊಂದು ಪ್ರಶ್ನಿಸಿದಾಗ, ನಾವು ಯಾವುದೇ ರೀತಿಯಲ್ಲೂ ಅಕ್ರಮವಾಗಿ ಆಸ್ತಿಯನ್ನು ಕಬಳಿಸಿಲ್ಲ. ಒಂದು ವೇಳೆ ಆ ರೀತಿ ಅಕ್ರಮವಾಗಿ ಆಸ್ತಿ ಸಂಪಾದಿಸಿದ್ದರೆ ಸರಕಾರ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ನೇರವಾಗಿ ಸವಾಲು ಹಾಕಿದರು.
ತದನಂತರ ಟಿವಿ9 ಸ್ಟುಡಿಯೋದಲ್ಲಿ ಬಿಜಿ ಪುಟ್ಟಸ್ವಾಮಿ ಅವರು ಗೌಡರ ಕುಟುಂಬದ ಭೂ ದಾಹ ಕಬಳಿಕೆ ಬಗ್ಗೆ ಚರ್ಚೆ ನಡೆಸುತ್ತಿದ್ದಾಗ, ಆ ಸಂದರ್ಭದಲ್ಲಿ ದೂರವಾಣಿ ಮೂಲಕ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡುತ್ತಿದ್ದಾಗ ನಾವು ಅಕ್ರಮವಾಗಿ ಭೂಮಿ ಸಂಪಾದಿಸಿದ್ದರೆ ಅದನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಲಿ ಎಂದರು.
ಆಗ ಪುಟ್ಟಸ್ವಾಮಿ ಜತೆ ನೀವೇ ಮಾತನಾಡಿ ಎಂದಾಗ, ಹೋಗ್ರಿ...ಆ ಪೋಲಿ ಹತ್ತಿರ ಏನ್ ಮಾತಾಡೋದು. ಪಾಪರ್‌ಚೀಟಿ(ದಿವಾಳಿಯಾದ) ತಗೊಂಡವನ ಪ್ರಶ್ನೆಗೆಲ್ಲಾ ಉತ್ತರ ಕೊಡಲಿಕ್ಕೆ ನಾನು ಇದ್ದಿದ್ದಲ್ಲ ಎಂದು ಏಕಾಏಕಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಆಗ ಪುಟ್ಟಸ್ವಾಮಿ, ಏಯ್ ಮರ್ಯಾದೆ ಕೊಟ್ಟು ಮಾತನಾಡು, ಮರ್ಯಾದೆ ಕೊಟ್ಟು, ಮರ್ಯಾದೆ ತಗೊಳ್ಳೋದನ್ನು ಕಲಿತುಕೊ ಎಂದಾಗ, ತಾಳ್ಮೆಗೆಟ್ಟ ಕುಮಾರಸ್ವಾಮಿ, ಮುಚ್ಚಲೇ ನಿನ್ನ ಜತೆ ನನಗೇನು ಮಾತು ಅಂತ ಲೈನ್ ಕಟ್ ಮಾಡಿದರು.
ಏನ್ರಿ ಮಾಜಿ ಮುಖ್ಯಮಂತ್ರಿಯಾದವರು ಈ ರೀತಿ ಮಾತಾಡೋದು. ನನ್ನ ವಯಸ್ಸೆಷ್ಟು, ಇವನ ವಯಸ್ಸೆಷ್ಟು ಎಂದು ಆಕ್ರೋಶ ವ್ಯಕ್ತಪಡಿಸಿದ ಪುಟ್ಟಸ್ವಾಮಿ, ಇವರ ಗೊಡ್ಡು ಬೆದರಿಕೆಗೆ ಹೆದರುವವ ನಾನಲ್ಲ. ಇವರ ಯೋಗ್ಯತೆ ಏನು ಅಂತ ನನಗೆ ಚೆನ್ನಾಗಿ ತಿಳಿದಿದೆ ಎಂದರು.