ಬಿಡದಿ ಧ್ಯಾನಪೀಠ ಆಶ್ರಮದ ನಿತ್ಯಾನಂದ ಸ್ವಾಮಿ ಸೇರಿದಂತೆ ಐವರ ವಿರುದ್ಧ ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ಅತ್ಯಾಚಾರ ಮತ್ತು ಅಸ್ವಾಭಾವಿಕ ಲೈಂಗಿಕ ಕ್ರಿಯೆ ಆರೋಪ ಪಟ್ಟಿ ಸುಳ್ಳು ಎಂದು ನಿತ್ಯಾನಂದ ಶಿಷ್ಯ ಸ್ವಾಮಿ ಭಕ್ತಾನಂದ ಆರೋಪಿಸುವ ಮೂಲಕ ಸಿಐಡಿ ಅಧಿಕಾರಿಗಳು ದಿಕ್ಕು ತಪ್ಪಿಸುವ ಯತ್ನ ನಡೆಸಿದ್ದಾರೆಂದು ತಿಳಿಸಿದ್ದಾರೆ.
ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಿ ಸ್ವಾಮಿ ನಿತ್ಯಾನಂದ ಸೇರಿದಂತೆ ಐವರ ವಿರುದ್ಧ ಸಿಐಡಿ ಪೊಲೀಸರು ರಾಮನಗರ ಸಿಜೆಎಂ ನ್ಯಾಯಾಲಯದಲ್ಲಿ ಸುಮಾರು 430 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದರು.
ನಿತ್ಯಾನಂದ ವಿರುದ್ಧ ಮತ್ತೋರ್ವ ಮಹಿಳೆ ನೀಡಿರುವ ದೂರು ಮತ್ತು ಹೇಳಿಕೆಯನ್ನು ಆಧರಿಸಿ ಸಿಐಡಿ ಅಧಿಕಾರಿಗಳು ಅತ್ಯಾಚಾರ ಆರೋಪದಡಿ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಆದರೆ ಈ ಅನಾಮಿಕ ಮಹಿಳೆ ಇರುವುದೇ ಸುಳ್ಳು ಎಂದು ವಾದಿಸಿರುವ ಭಕ್ತಾನಂದ, ರಾಸಲೀಲೆಯ ವೀಡಿಯೋ ಸಿ.ಡಿ. ಅಸಲಿಯಲ್ಲ ಎಂದು ಮಂಗಳವಾರ ಬಿಡದಿ ಆಶ್ರಮದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ದೂರಿದ್ದಾರೆ.
ಅಷ್ಟೇ ಅಲ್ಲ ಐವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿರುವ ಸಿಐಡಿ ಅಧಿಕಾರಿಗಳು, ಚಾರ್ಜ್‌ಶೀಟ್‌ನಿಂದ ಏಳು ಮಂದಿಯನ್ನು ಕೈಬಿಟ್ಟಿದ್ದಾರೆ. ಲೆನಿನ್ ನೀಡಿರುವ ದೂರಿನಲ್ಲಿಯೂ ಅತ್ಯಾಚಾರದ ಪ್ರಸ್ತಾಪವಿಲ್ಲ. ಆದರೆ ಸಿಐಡಿ ಅಧಿಕಾರಿಗಳು ನಿತ್ಯಾನಂದ ಸ್ವಾಮಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಅವರಲ್ಲಿ ಸರಿಯಾದ ಸಾಕ್ಷಿ ಇಲ್ಲದೆ 377ನೇ ಸೆಕ್ಷನ್ ಅನ್ನು ಹೇಗೆ ಬಳಕೆ ಮಾಡಿಕೊಂಡರು ಎಂದು ಪ್ರಶ್ನಿಸಿದ್ದಾರೆ.
ರಾಸಲೀಲೆ ಪ್ರಕರಣದ ಕುರಿತಂತೆ ವಿದೇಶಿ ಎನ್ನಲಾದ ವಿನಯ್ ಎಂಬಾತ ಸಿಐಡಿ ಅಧಿಕಾರಿಗಳಿಗೆ ಹೇಳಿಕೆ ನೀಡಲೇ ಇಲ್ಲ. ಅಧಿಕಾರಿಗಳು ಸುಮ್ಮನೆ ಕಥೆ ಕಟ್ಟಿ ಹೇಳುತ್ತಿದ್ದಾರೆ. ವಿನಯ್ ಲೈಂಗಿಕ ದೌರ್ಜನ್ಯದ ಆರೋಪಿ. ಆತನ ಮೇಲೆ ಅಮೆರಿಕದಲ್ಲಿ ಮೊಕದ್ದಮೆ ಕೂಡ ದಾಖಲಾಗಿದೆ ಎಂದು ಸ್ವಾಮಿ ಭಕ್ತಾನಂದ ವಿವರಿಸಿದ್ದಾರೆ. ಈ ಪ್ರಕರಣದಲ್ಲಿ ಸ್ವಾಮಿ ನಿತ್ಯಾನಂದ ಅವರಿಗೆ ಜಯ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.