ಕೋಲಾರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅ.14ರಂದು ನಡೆದ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ಸರಕಾರದ ಪರ ಮತ ಚಲಾಯಿಸುವ ಮೂಲಕ ಬಿಜೆಪಿ ಜತೆ ಗುರುತಿಸಿಕೊಂಡಿದ್ದು, ಇದೀಗ ಸ್ಪೀಕರ್ ಕೆ.ಜಿ.ಬೋಪಯ್ಯ ವರ್ತೂರ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ.
ಆರಂಭದಲ್ಲಿಯೇ ಬಿಜೆಪಿ ಸರಕಾರಕ್ಕೆ ಬೆಂಬಲ ನೀಡಿ ತದನಂತರ ಬಿಜೆಪಿ ವಿರುದ್ಧ ಮುನಿಸಿಕೊಂಡು ಜೆಡಿಎಸ್ ಜತೆ ಕೈಜೋಡಿಸಿದ್ದ ವರ್ತೂರು. ದಿಢೀರನೆ ಮತ್ತೆ ಬಿಜೆಪಿ ಪಾಳಯಕ್ಕೆ ಜಿಗಿದು, ಅ.14ರಂದು ಮುಖ್ಯಮಂತ್ರಿ ಯಡಿಯೂರಪ್ಪ ಪರ ವಿಶ್ವಾಸಮತ ಯಾಚನೆ ಸಂದರ್ಭ ಬೆಂಬಲ ಘೋಷಿಸಿ ಮತ ಚಲಾಯಿಸಿದ್ದರು.
ಆ ನಿಟ್ಟಿನಲ್ಲಿ ಪದೇ, ಪದೇ ನಿಷ್ಠೆ ಬದಲಾಯಿಸುವ ವರ್ತೂರು ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಕೋರಿ ಕೋಲಾರ ಕ್ಷೇತ್ರದ ಮತದಾರರಾದ ಕೃಷ್ಣಪ್ಪ, ರಾಮಚಂದ್ರಪ್ಪ ಅವರು ಸ್ಪೀಕರ್‌ಗೆ ದೂರು ನೀಡಿದ್ದರು. ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ಬೋಪಯ್ಯ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ಪಕ್ಷೇತರರಾಗಿ ಆಯ್ಕೆಯಾಗಿ, ಹಣ ಮತ್ತು ಅಧಿಕಾರದ ಆಸೆಗೆ ಬಲಿಬಿದ್ದು ಶಾಸಕ ವರ್ತೂರು ಪ್ರಕಾಶ್ ಪಕ್ಷದಿಂದ, ಪಕ್ಷಕ್ಕೆ ಜಿಗಿಯುವ ಮೂಲಕ ಕ್ಷೇತ್ರದ ಅಭಿವೃದ್ಧಿಯನ್ನೇ ಕಡೆಗಣಿಸಿದ್ದಾರೆ ಎಂದು ಮತದಾರರು ಅರ್ಜಿಯಲ್ಲಿ ದೂರಿದ್ದಾರೆ. ಎರಡನೇ ಬಾರಿ ಬಿಜೆಪಿಗೆ ಬೆಂಬಲ ನೀಡಿರುವ ವರ್ತೂರ್‌ಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ವರ್ತೂರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಎಲ್ಲಾ ಸಿದ್ದತೆ ನಡೆದಿತ್ತು. ಆದರೆ ದಿಢೀರ್ ರಾಜಕೀಯ ಬೆಳವಣಿಗೆಯಿಂದಾಗಿ ಸಚಿವ ಸಂಪುಟ ವಿಸ್ತರಣೆಯನ್ನು ಕೈಬಿಡಲಾಗಿತ್ತು. ಆದರೂ ತನಗೆ ಸಚಿವಪಟ್ಟ ಖಚಿತ ಎಂದು ವರ್ತೂರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.