ರೈತರ ಜಮೀನನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ರೈತರ ಮನವೊಲಿಸಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಭರವಸೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಪರಿಸರ, ಆರೋಗ್ಯ ಮತ್ತು ಭದ್ರತೆ ಸಂಶೋಧನಾ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಸ್ವಾಧೀನ ಸೇರಿದಂತೆ ಬೆಳೆಗಳ ಬೆಲೆ ನಿಗದಿ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಡಿಸೆಂಬರ್ 14ರಂದು ವಿಧಾನಸೌಧದಲ್ಲಿ ರೈತ ಮುಖಂಡರ ಸಭೆ ನಡೆಸುವುದಾಗಿ ಹೇಳಿದರು.
ಈ ಸಭೆಯಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ ಹಲವು ಸಚಿವರು ಭಾಗವಹಿಸಲಿದ್ದಾರೆ. ಅಲ್ಲದೇ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಕೈಗಾರಿಕಾ ಉದ್ದೇಶಗಳಿಗೆ ಜಮೀನು ಬಿಟ್ಟುಕೊಟ್ಟ ರೈತರು ಬೇರೆ ಕಡೆ ಭೂಮಿ ಖರೀದಿಸಿದರೆ ಅವರಿಗೆ ನೋಂದಣಿ ಶುಲ್ಕದಿಂದ ವಿನಾಯ್ತಿ ನೀಡಲಾಗುವುದು ಎಂದರು.