ಗೂಂಡಾಗಿರಿ, ಬ್ಲ್ಯಾಕ್‌ಮೇಲ್, ಸುಳ್ಳನ್ನು ವೈಭವೀಕರಿಸುವ ರಾಜಕಾರಣ ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪಾಪದ ಕೊಡ ತುಂಬಿದೆ. ಆದರೆ ಇವರ ಪಾಳೇಗಾರಿಕೆಗೆ ಬೆದರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಅವರ ನಿವಾಸದ ಮೇಲೆ ಮಂಗಳವಾರ ರಾತ್ರಿ ಕುಮಾರಸ್ವಾಮಿ ಅವರ ಬೆಂಬಲಿಗರು ನಡೆಸಿದ ದಾಂಧಲೆ ಅತ್ಯಂತ ಹೇಯ ಕೃತ್ಯ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಆರೋಪಿಸಿದರು.
ರಾಜಕಾರಣದಲ್ಲಿ ಇಂತಹ ಘಟನೆಗಳು ನಡೆಯಬಾರದು. ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ನಿಟ್ಟಿನಲ್ಲಿ ಬೆದರಿಕೆಯ ತಂತ್ರವನ್ನು ಅನುಸರಿಸುತ್ತಿದ್ದಾರೆ. ಹಾಗಂತ ನಾವೂ ಸುಮ್ಮನೆ ಕೂರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಳಿತದ ಅಕ್ರಮಗಳನ್ನು ಬಯಲಿಗೆಳೆಯುತ್ತೇವೆ. ಇವರ ಕೆಟ್ಟ ರಾಜಕಾರಣಕ್ಕೆ ಕೊನೆ ಹಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಸೋಮಣ್ಣ ಹರಿಹಾಯ್ದರು.
ಪಾಳೇಗಾರಿಕೆ ಸಂಸ್ಕೃತಿಯನ್ನು ತೋರುತ್ತಿರುವ ಕುಮಾರಸ್ವಾಮಿ ಅವರಿಗೆ ಜನತೆಯೇ ಪಾಠ ಕಲಿಸುತ್ತಾರೆ. ಅವರು ಜವಾಬ್ದಾರಿ ಅರಿತು ಕೆಲಸ ಮಾಡಿದರೆ ಒಳ್ಳೆಯದು ಎಂದು ಸಲಹೆ ನೀಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿಗತ ದ್ವೇಷ ಒಳ್ಳೆಯದಲ್ಲ. ನಿನ್ನೆಯ ದಾಂಧಲೆಯಿಂದ ಕುಮಾರಸ್ವಾಮಿ ಅವರ ಬಣ್ಣ ಬಯಲಾಗಿದೆ ಎಂದರು.