ಚಾರ್ಜ್‌ಶೀಟ್ ರದ್ದು; ನಿತ್ಯಾನಂದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಬೆಂಗಳೂರು, ಬುಧವಾರ, 1 ಡಿಸೆಂಬರ್ 2010( 18:36 IST )
ತಮ್ಮ ಮೇಲೆ ಸಿಐಡಿ ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್ ರದ್ದುಪಡಿಸುವಂತೆ ಕೋರಿ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಇಂದು ನಿತ್ಯಾನಂದ ಪರ ವಕೀಲರು ಹೈಕೋರ್ಟ್‌ನ ನ್ಯಾಯಮೂರ್ತಿ ಕುಮಾರಸ್ವಾಮಿ ಅವರ ಮುಂದೆ ಅರ್ಜಿ ಸಲ್ಲಿಸಿ ಚಾರ್ಜ್‌ಶೀಟ್ ರದ್ದತಿ ತಡೆ ಕೋರಿದ್ದರು. ಆದರೆ ಈಗಾಗಲೇ ಪೊಲೀಸರು ರಾಮನಗರ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಈ ಹಂತದಲ್ಲಿ ತಡೆ ಕೊಡಲು ಸಾಧ್ಯವಿಲ್ಲ. ನೀವು ಆ ನ್ಯಾಯಾಲಯದಲ್ಲೇ ಕೋರಿಕೆ ಅರ್ಜಿ ಸಲ್ಲಿಸಿ ಎಂದು ಪೀಠ ಸಲಹೆ ನೀಡಿದೆ.
ಇದೇ ವೇಳೆ ಚಾರ್ಜ್‌ಶೀಟ್ ಮಾಹಿತಿಯನ್ನು ನೀಡಲು ಸೂಚಿಸುವಂತೆ ನಿತ್ಯಾನಂದ ಪರ ವಕೀಲರು ಹೈಕೋರ್ಟ್‌ನಲ್ಲಿ ಮನವಿ ಮಾಡಿದರು. ಚಾರ್ಜ್‌ಶೀಟ್ ಪ್ರತಿಯನ್ನು ನೀಡುವಂತೆ ಸಿಐಡಿ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.
ಈ ಸಂದರ್ಭದಲ್ಲಿ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿರುವ ಸಿಐಡಿ ಎಸ್‌ಪಿ ಯೋಗಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ 101 ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ. ಐವರು ಆರೋಪಿಗಳನ್ನು ಬಂಧಿಸಿದ್ದು 430 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ವಿವರಿಸಿದರು. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಡಿ.14ಕ್ಕೆ ಮುಂದೂಡಿದೆ.